ಕಾರವಾರ:ಉತ್ತರಕನ್ನಡ ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷ ಮುಂದುವರೆದಿದೆ. ಕಳೆದ ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಕ್ಕರೆ ಆಯುಕ್ತರೊಂದಿಗೆ ಕಬ್ಬು ಬೆಳೆಗಾರರ ಸಭೆ ನಡೆದಿತ್ತು. ಬಾಕಿ ಉಳಿದ ಕಬ್ಬು ಸಾಗಾಣಿಕೆ ವೆಚ್ಚದ ಕುರಿತು ತನಿಖೆ ನಡೆಸಿ ಶೀಘ್ರವೇ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದರು. ಅಧಿಕಾರಿಗಳು ನೀಡಿದ ಭರವಸೆ ಹುಸಿಯಾಗಿದೆ. ಇದು ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಹಳಿಯಾಳ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ನಡುವಿನ ತಿಕ್ಕಾಟ ಸರ್ಕಾರದ ಹಂತ ತಲುಪಿದರೂ ಕೂಡಾ ಬಗೆಹರಿಯುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರಿಗೆ ಯೋಗ್ಯ ದರ ನೀಡುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಟಕ್ಕೆ 893 ರೂಪಾಯಿಯನ್ನು ವೆಚ್ಚ ಪಡೆಯಲಾಗುತ್ತಿದೆ. ಅದರಲ್ಲಿ ಪ್ರತಿ ಟನ್ ಕಬ್ಬು ಸಾಗಾಟ ವೆಚ್ಚಕ್ಕೆ 261 ರೂಪಾಯಿ ಹಾಗೂ ಕಟಾವಿಗೆ 323 ರೂಪಾಯಿ ವೆಚ್ಚ ಹಾಗೂ ಉಳಿದಂತೆ 309 ರೂಪಾಯಿಯನ್ನು ಕಳೆದ 3 ವರ್ಷದಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಈ ವಿಚಾರವನ್ನು ಖಂಡಿಸಿ ರೈತರು ಒಂದು ತಿಂಗಳವರೆಗೆ ಪ್ರತಿಭಟನೆ ನಡೆಸಿ, ನ್ಯಾಯ ಒದಗಿಸಲು ಆಗ್ರಹಿಸಿದ್ದರು.
ನಡೆಯದ ಹೆಚ್ಚುವರಿ ವೆಚ್ಚದ ತನಿಖೆ:''ರೈತರ ಒತ್ತಾಯ ಮಣಿದ ಸಕ್ಕರೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿ, ಕಬ್ಬು ಕಟಾವಿಗೆ ಹೆಚ್ಚುವರಿ ವೆಚ್ಚ ಪಡೆದಿರುವ ಕುರಿತು ತನಿಖೆ ನಡೆಸಿ ಬಾಕಿ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಹೆಚ್ಚುವರಿ ವೆಚ್ಚದ ತನಿಖೆ ಮಾತ್ರ ನಡೆದಿಲ್ಲ. ಮೋಸದಿಂದ ಪಡೆದ ಹಣವನ್ನು ಕೂಡಲೇ ರೈತರಿಗೆ ಹಿಂತಿರುಗಿಸಬೇಕು. ಈ ಸಮಸ್ಯೆ ಪರಿಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುವುದು'' ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪ ಕುಮಾರ ಬೂಬಾಟಿ ಎಚ್ಚರಿಕೆ ನೀಡಿದ್ದಾರೆ.