ಭಟ್ಕಳ: ಇಲ್ಲಿನ ತಂಝೀಮ್ ಸಂಘಟನೆ ಮತ್ತು ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ಕ್ಲಿನಿಕ್, ಕಳೆದ 10 ದಿನಗಳಿಂದ ಜನರ ಮನೆ ಬಾಗಿಲಿಗೆ ಆಗಮಿಸಿ ಸೇವೆ ನೀಡುತ್ತಿದೆ.
ಅನಾರೋಗ್ಯ ಇರುವ ಜನರು ಮಾಹಿತಿ ನೀಡಿದರೆ ತಕ್ಷಣ ಅವರ ಮನೆ ಬಾಗಿಲಿಗೆ ಈ ಮೊಬೈಲ್ ಕ್ಲಿನಿಕ್ ತೆರಳುತ್ತದೆ. ಈ ಕ್ಲಿನಿಕ್ನಲ್ಲಿ ಇರುವ ಉತ್ತಮ ವೈದ್ಯಕೀಯ ತಂಡ ರೋಗಿಯನ್ನು ಅಲ್ಲೇ ಪರೀಕ್ಷಿಸಿ ಔಷಧಿ ನೀಡುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಪಡೆದುಕೊಳ್ಳಲು ಸಲಹೆ ನೀಡುತ್ತದೆ.
ಮಾರುತಿ ಇಕೋ ವಾಹನದಲ್ಲಿ ಕಾರ್ಯಾಚರಿಸುತ್ತಿರುವ ಈ ಮೊಬೈಲ್ ಕ್ಲಿನಿಕ್ನಲ್ಲಿ, ಓರ್ವ ವೈದ್ಯ, ನರ್ಸ್, ಫಾರ್ಮಾಸಿಸ್ಟ್ ಜೊತೆಗೆ ಅನಾರೋಗ್ಯ ಪೀಡಿತರ ಆಮ್ಲಜನಕ ಮತ್ತಿತರ ಅವಶ್ಯಕತೆಗಳನ್ನು ಪರೀಕ್ಷಿಸಲು ಸಹಾಯಕರೊಬ್ಬರನ್ನು ನಿಯೋಜಿಸಲಾಗಿದೆ. ಆಯಾ ಭಾಗದ ಕ್ರೀಡಾ ಸಂಘದ ಯುವಕರು, ಮುಖಂಡರು ತಮ್ಮ ಭಾಗದ ಅನಾರೋಗ್ಯ ಪೀಡಿತರ ಬಗ್ಗೆ ಮೊಬೈಲ್ ಕ್ಲಿನಿಕ್‌ಗೆ ಮಾಹಿತಿ ನೀಡುತ್ತಾರೆ. ಮಾಹಿತಿ ಪಡೆದ ವೈದ್ಯಕೀಯ ತಂಡ ಮನೆ ಬಾಗಿಲಿಗೆ ಬರುತ್ತದೆ. ಕಳೆದ ಹತ್ತು ದಿನಗಳಿಂದ ಈ ಮೊಬೈಲ್ ಕ್ಲಿನಿಕ್ ಜಾತಿ, ಧರ್ಮಗಳ ಹಂಗಿಲ್ಲದೆ ಹಲವರಿಗೆ ಚಿಕಿತ್ಸೆಯನ್ನು ಒದಗಿಸಿದೆ.
ಜನವಸತಿ ಪ್ರದೇಶಗಳಲ್ಲಿ ಮೆಡಿಕಲ್ ಕ್ಯಾಂಪ್ ಪ್ರತಿ ದಿನ ಬೆಳಗ್ಗೆ 11:30 ರಿಂದ ಮಧ್ಯಾಹ್ನ 1:30 ಹಾಗೂ ಸಂಜೆ 4.30 ರಿಂದ 7 ಗಂಟೆಯವರೆಗೆ ಮೊಬೈಲ್ ಕ್ಲಿನಿಕ್ ಸೌಲಭ್ಯ ಲಭ್ಯವಿದ್ದು, ತಾಲೂಕಿನ ಯಾವುದೇ ಭಾಗದ ಜನರು ದೂರವಾಣಿ ಕರೆಯ ಮೂಲಕ ಕ್ಲಿನಿಕ್ ಸೇವೆಯನ್ನು ಪಡೆಯಬಹುದಾಗಿದೆ.
ಮೊಬೈಲ್ ಕ್ಲಿನಿಕ್ ಬಗ್ಗೆ ವಿವರಿಸಿದ ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ್‍ರಹಮಾನ್ ರುಕ್ನುದ್ದೀನ್ ನದ್ವಿ ಈ ಬಗ್ಗೆ ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ್‍ರಹಮಾನ್ ರುಕ್ನುದ್ದೀನ್ ನದ್ವಿ ಮಾತನಾಡಿ, 10 ದಿನಗಳ ಅವಧಿಯಲ್ಲಿ ಮೊಬೈಲ್ ಕ್ಲಿನಿಕ್ ಸರಿ ಸುಮಾರು 500 ಜನರಿಗೆ ವೈದ್ಯಕೀಯ ಸೇವೆ ನೀಡಿದೆ. ತಾಲೂಕಿನ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ತಮ್ಮ ಭಾಗದ ಅನಾರೋಗ್ಯ ಪೀಡಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ನಮಗೆ ನೀಡಿದರೆ, ಸಾಮೂಹಿಕ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.