ಕಾರವಾರ/ಉತ್ತರ ಕನ್ನಡ: ಫೇಸ್ಬುಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯೊಂದಿಗಿನ ಫೋಟೋ ಹಾಕಿಕೊಂಡು ಸೈನಿಕ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕಾರು ಮಾರಾಟದ ನೆಪದಲ್ಲಿ 33 ಸಾವಿರ ರೂ. ಆನ್ಲೈನ್ ವಂಚನೆ ಮಾಡಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಸೈನಿಕ ಎಂದು ಪರಿಚಯಿಸಿಕೊಂಡ ಬೆಂಗಳೂರು ಮೂಲದ ಅನ್ನಪೂರ್ಣ ತನ್ನ ಫೇಸ್ಬುಕ್ ಖಾತೆಯಲ್ಲಿ ಒಟ್ಟು ನಾಲ್ಕು ಕಾರು ಮಾರಾಟಕ್ಕಿದೆ ಎಂದು ಕಾರಿನ ಪೋಟೋದೊಂದಿಗೆ ಮಾಹಿತಿ ಹಾಕಿದ್ದ. ಅಲ್ಲದೆ ಖರೀದಿಸುವವರು ಸಂಪರ್ಕಿಸುವಂತೆ ಫೋನ್ ನಂಬರ್ ಕೂಡ ನೀಡಿದ್ದ. ಅದರಂತೆ ವಿನಾಯಕ ಎಂಬುವವರು ಕರೆ ಮಾಡಿ ವಿಚಾರಿಸಿದ್ದರು. ತನಗೆ ಕಾಶ್ಮೀರಕ್ಕೆ ವರ್ಗಾವಣೆಯಾಗಿದ್ದು ತುರ್ತು ತೆರಳಬೇಕಾಗಿರುವುದರಿಂದ ನಾಲ್ಕು ಕಾರು ಮಾರಾಟ ಮಾಡುತ್ತಿದ್ದೇನೆ ಎಂದು ಬೇಕಾದಲ್ಲಿ ನೋದಣಿ ಫೀ 11 ಸಾವಿರ ಕಳುಹಿಸುವಂತೆ ತಿಳಿಸಿದ್ದರು. ಇದನ್ನು ನಂಬಿದ ವಿನಾಯಕ ತನ್ನ ಅಣ್ಣ ರಾಘು ನಾಯ್ಕ ಎಂಬುವವರ ಹೆಸರಿನಲ್ಲಿ ಬುಕ್ ಮಾಡಿದ್ದರು.
ಬಳಿಕ ಆತ ಅಂಕೋಲಾ ಹಾಗೂ ಕುಮಟಾದಲ್ಲಿ ಮೂರು ಕಾರು ಬುಕ್ ಆಗಿದೆ. ಅದನ್ನು ತರುವಾಗಲೇ ನಿಮ್ಮ ಕಾರನ್ನು ಮಿಲಿಟರಿ ವಾಹನದಲ್ಲಿ ತರಲಾಗುವುದು. ಫೆ. 7 ರಂದು ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದನು .ಇದನ್ನು ನಂಬಿದ ವಿನಾಯಕ ಮನೆಯಲ್ಲಿ ಕಾಯುತ್ತಿರುವಾಗ ಮತ್ತೆ ಕರೆ ಮಾಡಿ 22 ಸಾವಿರ ಹಾಕುವಂತೆ ತಿಳಿಸಿದ್ದರು. ಅವರು ಹೇಳಿದಂತೆ ಹಣ ಗೂಗಲ್ ಪೇ ಮಾಡಿದ್ದರು. ಮತ್ತೆ ಪುನಃ ಫೋನ್ ಮಾಡಿ ಅಂಕೋಲಾದಲ್ಲಿದ್ದು ಮನೆಗೆ ಬರಬೇಕಾದರೆ ಮತ್ತೆ 19 ಸಾವಿರ ಹಾಕುವಂತೆ ತಿಳಿಸಿದ್ದರು. ಆದರೆ ಈ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ ಮೋಸ ಹೋಗಿರುವುದು ಗಮನಕ್ಕೆ ಬಂದಿದ್ದು, ಸೈಬರ್ ಕ್ರೈಮ್ ದೂರು ದಾಖಲಿಸಲಾಗಿದೆ.
ಆದರೆ ದೇಶದ ಪ್ರಧಾನಿ ಹಾಗೂ ಸೈನಿಕರ ಹೆಸರಿನಲ್ಲಿಯೂ ಆನ್ಲೈನ್ ವಂಚನೆ ಜಾಲ ಕಾರ್ಯ ನಿರ್ವಹಿಸುತ್ತಿರುವ ಅನುಮಾನವಿದ್ದು, ಈ ಬಗ್ಗೆ ಪ್ರಧಾನಮಂತ್ರಿಗೂ ದೂರು ನೀಡಲಾಗಿದೆ. ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷರೂ ಆಗಿರುವ ರಾಘು ನಾಯ್ಕ ಒತ್ತಾಯಿಸಿದ್ದಾರೆ.