ಶಿರಸಿ:ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಉರಗ ಪ್ರೇಮಿಯೊಬ್ಬರು ನಿಜ ನಾಗರಕ್ಕೆ ಹಾಲೆರೆದು ಪೂಜೆ ಸಲ್ಲಿಸಿದ್ದಾರೆ. ಭುಸುಗುಟ್ಟುವ ನಾಗರ ಹಾವಿನ ಆರ್ಭಟದ ನಡುವೆ ಯಾವುದೇ ಆತಂಕವಿಲ್ಲದೆ ಭಕ್ತಿಯ ವಾತಾವರಣದಲ್ಲಿ ನಾಗ ಪೂಜೆ ನೆರವೇರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪ್ರಶಾಂತ್ ಹುಲೇಕಲ್ ಕುಟುಂಬದ ಸದಸ್ಯರು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ನಿಜ ನಾಗರಕ್ಕೆ ಹಾಲೆರೆದು ಪಂಚಮಿ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ಒಂದು ನಾಗರಹಾವಿಗೆ ಪೂಜೆ ಮಾಡುತ್ತಿದ್ದ ಪ್ರಶಾಂತ್ ಕುಟುಂಬ, ಈ ಬಾರಿ ಎರಡು ನಾಗರ ಹಾವುಗಳಿಗೆ ಪೂಜೆ ಸಲ್ಲಿಸಿರೋದು ವಿಶೇಷ.
ನೈಜ ನಾಗರ ಹಾವುಗಳಿಗೆ ಪೂಜೆ ಸಲ್ಲಿಸಿದ ಶಿರಸಿಯ ಕುಟುಂಬ ಕಳೆದ 35 ವರ್ಷಗಳಿಂದ ನಿರಂತರವಾಗಿ ಉರಗ ಸಂತತಿಯ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿಯನ್ನು ತೋರುತ್ತಾ ಬಂದಿರುವ ಪ್ರಶಾಂತ್ ಹುಲೇಕಲ್ ಕುಟುಂಬ, ಪ್ರತಿ ನಾಗರ ಪಂಚಮಿ ಹಬ್ಬವನ್ನು ನಾಗ ಸಂತತಿಯ ಬಗ್ಗೆ ಸಂದೇಶ ಸಾರುವ ಸಂದರ್ಭವನ್ನಾಗಿ ಬಳಸಿಕೊಳ್ಳುತ್ತಿದೆ. ವಿಷದ ಹಲ್ಲುಗಳಿರುವ ಸರ್ಪಗಳನ್ನು ಮನೆಯೊಳಗೆ ಪ್ರತಿಷ್ಠಾಪಿಸಿ, ಇತರರು ಕಲ್ಲು ನಾಗರಗಳಿಗೆ ಹಾಲೆರೆದಂತೆ ಹಾಲೆರೆದು ಪೂಜಿಸುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.
ಇನ್ನು ಪ್ರಶಾಂತ್ ಪತ್ನಿ, ಮಗಳು ಹಾಗೂ ಮಗ ಕೂಡ ನಿಜ ಹಾವನ್ನು ಕಂಡು ಭಯ ಪಡದೆ ಪೂಜೆ ಸಲ್ಲಿಸೋದು ನಿಜಕ್ಕೂ ಆಶ್ಚರ್ಯ ಮೂಡಿಸುತ್ತೆ. ಏನೆ ಆಗಲಿ ಇವರ ಉರಗ ಪ್ರೇಮಕ್ಕೆ ಸಲಾಂ ಹೇಳಲೇಬೇಕು.