ಉತ್ತರ ಕನ್ನಡ: ಶಿರಸಿ ತಾಲ್ಲೂಕಿನ ದೇವತೆಮನೆ ಗ್ರಾಮದ ರಾಮಕೃಷ್ಣ ಭಟ್ ತಮ್ಮ 4 ಗುಂಟೆ ಜಮೀನಿನಲ್ಲಿ ಭತ್ತದ ತಳಿಗಳ ಪ್ರಯೋಗ ಶಾಲೆಯನ್ನೇ ತೆರೆದಿದ್ದು, ಸುಮಾರು 265 ಬಗೆಯ ಪಾರಂಪರಿಕ ತಳಿಯನ್ನು ಬೆಳೆಸಿದ್ದಾರೆ.
ಪ್ರತಿ ತಳಿಯ ಸಸಿಗಳಿಗೆ ಪ್ರತ್ಯೇಕ ಸಂಖ್ಯೆ ನೀಡಿದ್ದಾರೆ. ಈ ಸಂಖ್ಯೆ ಆಧರಿಸಿ ನೋಂದಣಿ ಪುಸ್ತಕದಲ್ಲಿ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದು, ಅದರಲ್ಲಿ 200ಕ್ಕಿಂತ ಹೆಚ್ಚು ಭತ್ತ ತಳಿಗಳ ಮಾಹಿತಿ ಇವರ ಬಳಿ ಲಭ್ಯವಿದೆ. ಮಾತ್ರವಲ್ಲದೆ, 65 ತಳಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.
ಕಳವೆ, ಮಟ್ಟಳಗ, ಹೊನ್ನಕಟ್ಟು, ಜೇನುಗೂಡು, ಗೌಡರ ಭತ್ತ, ದೊಡ್ಡ ಭತ್ತ, ಜಿಗ್ಗ ವರಟಿಗ, ನೀರ ಮುಳುಗ, ಕರಿ ಕಂಟಕ, ಲಿಂಬೆ ಮೊಹರಿ ಸೇರಿದಂತೆ ಹಲವು ಸ್ಥಳೀಯ ತಳಿಯ ಹಾಗೂ ನೇಪಾಳ, ಥಾಯ್ಲೆಂಡ್ ಭಾಗದಲ್ಲಿ ಬೆಳೆಯುವ ವಿದೇಶಿ ತಳಿಗಳಿವೆ.
ನಾಲ್ಕೇ ಗುಂಟೆ ಜಮೀನಿನಲ್ಲಿ 265 ಭತ್ತದ ತಳಿ ಬೆಳೆದು ಅಚ್ಚರಿ ಮೂಡಿಸಿದ ರಾಮಕೃಷ್ಣ ಭಟ್ ಭತ್ತವನ್ನು ಬೆಳೆಯುವ ರೈತರು ಹಾಗೂ ಇರುವ ಭತ್ತದ ಗದ್ದೆಗಳನ್ನು ತೆಗೆದು ಅಡಿಕೆ ತೋಟಗಳನ್ನು ಮಾಡುವವರ ಮಧ್ಯದಲ್ಲಿ ಲಾಭದಾಯಕ ಅಲ್ಲದೇ ಹೋದರೂ ಪಾರಂಪರಿಕ ತಳಿಗಳನ್ನು ಉಳಿಸಬೇಕು ಎನ್ನುವ ಉದ್ದೇಶದಿಂದ ಇವರು ಭತ್ತ ತಳಿಯ ಸಂಗ್ರಹದ ಆಸಕ್ತಿ ಶ್ಲಾಘನೀಯ ಎನ್ನುವುದು ಕೃಷಿ ವಿಜ್ಞಾನ ಕೇಂದ್ರದವರ ಮಾತಾಗಿದೆ. ಇದೇ ಕಾರಣಕ್ಕಾಗಿ ಈ ಹಿಂದೆ ಕೃಷಿ ಮೇಳದಲ್ಲಿ ಇನ್ನೊವೇಟಿವ್ ಫಾರ್ಮರ್ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ.
ಕೃಷಿಯನ್ನೂ ಉದ್ಯಮವನ್ನಾಗಿ ಮಾರ್ಪಾಟು ಮಾಡಿ ಕೇವಲ ಲಾಭ ನೋಡುವವರ ಮಧ್ಯದಲ್ಲಿ ರಾಮಕೃಷ್ಣ ಭಟ್ ಅವರ ಕಾರ್ಯ ಮಾದರಿ. ಅವರ ಕೆಲಸಕ್ಕೆ ಇನ್ನೂ ಹೆಚ್ಚಿನ ವೈಜ್ಞಾನಿಕ ನೆರವಿನ ಅಗತ್ಯವಿದ್ದು, ಪಾರಂಪರಿಕ ತಳಿಗಳನ್ನು ಗುರುತಿಸುವಲ್ಲಿ ಸರ್ಕಾರದ ನೆರವು ಸಿಗಬೇಕಿದೆ.