ಕಾರವಾರ:ರಸ್ತೆ ಪಕ್ಕದಲ್ಲಿ ಪಾರ್ಕಿಂಗ್ ಮಾಡಿದ್ದ ವಾಹನಗಳು ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾದ ಘಟನೆ ಕಾರವಾರ ನಗರಸಭೆ ವ್ಯಾಪ್ತಿಯಲ್ಲಿರುವ ಹರಿದೇವ ನಗರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ನಗರದ ರಸ್ತೆ ಪಕ್ಕದ ಸರ್ಕಾರಿ ಗ್ರಂಥಾಲಯ ಸಮೀಪದಲ್ಲಿ ವಿದ್ಯುತ್ ಕಂಬದ ಕೆಳಗೆ ಪಾರ್ಕಿಂಗ್ ಮಾಡಿದ್ದ 7 ಬೈಕ್, 5 ಸೈಕಲ್ ಹಾಗೂ ಒಂದು ಆಟೋ ಬೆಂಕಿಗೆ ಆಹುತಿಯಾಗಿವೆ. ಅದರಲ್ಲಿ ಬಹುತೇಕ ಎಲ್ಲ ಬೈಕ್ಗಳು ಸುಟ್ಟು ಕರಕಲಾಗಿವೆ.
ಬೆಂಕಿಗೆ ಆಹುತಿಯಾದ ಬೈಕ್ಗಳು ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬೈಕ್ ನಿಲ್ಲಿಸಿದ ಜಾಗದಲ್ಲಿಯೇ ವಿದ್ಯುತ್ ಕಂಬವಿದ್ದು ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ಇದೆ. ಇನ್ನು ಈ ಹಿಂದೆ ಇಲ್ಲಿ ನಿಲ್ಲಿಸಿದ್ದ ಬೈಕ್ನಿಂದ ಪೆಟ್ರೋಲ್ ಕದಿಯುತ್ತಿದ್ದರು. ಅದೇ ರೀತಿ ನಿನ್ನೆ ಕೂಡ ಪೆಟ್ರೋಲ್ ಕದಿಯುವ ವೇಳೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂಬುದು ಇಲ್ಲಿನ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಹರಿದೇವ ನಗರದ ಬಹುತೇಕರ ಮನೆಗಳು ಗುಡ್ಡದ ಮೇಲಿದ್ದು, ಮನೆಗೆ ರಸ್ತೆ ಇಲ್ಲದ ಕಾರಣ ಹಲವು ವರ್ಷಗಳಿಂದ ರಸ್ತೆ ಪಕ್ಕದಲ್ಲಿ ಪಾರ್ಕಿಂಗ್ ಮಾಡುತ್ತಿದ್ದರು. ಆದರೆ, ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.