ಕಾರವಾರ:ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ 2ನೇಯ ಬಾರಿಗೆ ಆಯ್ಕೆಯಾಗುವ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಈ ನಡುವೆ ಈ ಬಾರಿ 50 ಮಂದಿ ಸಾಧು-ಸಂತರು ರಾಜ್ಯ ರಾಜಕಾರಣಕ್ಕೆ ಇಳಿಯಲಿದ್ದಾರೆ ಎನ್ನುವ ಉಜಿರೆ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಹೇಳಿಕೆ ತೀವ್ರ ಸಂಚಲನವನ್ನ ಸೃಷ್ಟಿಸಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲಿಯೂ ಸ್ವಾಮೀಜಿಗಳು ರಾಜಕಾರಣಕ್ಕೆ ಆಗಮಿಸಿದಲ್ಲಿ ಏನೆಲ್ಲ ಪರಿಣಾಮ ಬೀರಲಿದೆ ಎನ್ನುವುದು ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
'ರಾಜ್ಯದ ರಾಜ್ಯಾಂಗ ವ್ಯವಸ್ಥೆ ದಿಕ್ಕು ತಪ್ಪುತ್ತಿದೆ. ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ಮಾರ್ಕೆಟ್‌ನಲ್ಲಿ ಗಲಾಟೆ ಮಾಡಿದಂತೆ ವರ್ತಿಸುತ್ತಾರೆ. ಇದನ್ನೆಲ್ಲ ನೋಡಿದರೆ ನಮ್ಮಲ್ಲಿ ಸಂವಿಧಾನ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ 50 ಕ್ಷೇತ್ರಗಳಲ್ಲಿ ಸಾಧು-ಸಂತರು ಸ್ಪರ್ಧಿಸಲು ನಿರ್ಧರಿಸಿದ್ದಾರೆ' ಹೀಗೆಂದು ಘೋಷಣೆ ಮಾಡಿದ್ದು ಉಜಿರೆಯ ಶ್ರೀರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಯುತ್ತಿರುವ ಶ್ರೀ ಸಾರದ ಹೊಳೆ ಹಳೆಕೋಟೆ ಶ್ರೀಕ್ಷೇತ್ರ ಹನುಮಂತ ದೇವರ ಪುನರ್ ಪ್ರತಿಷ್ಠಾನ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ವೇಳೆ ಸ್ವಾಮೀಜಿ ಈ ಹೇಳಿಕೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ ಪ್ರೇರಣೆ:ರಾಜ್ಯದಲ್ಲಿ ನಡೆಯುತ್ತಿರುವ ಸದ್ಯದ ಬೆಳವಣಿಗೆ ಕುರಿತು ಎರಡು ಮೂರು ತಿಂಗಳಿಗೊಮ್ಮೆ ಸಾಧು-ಸಂತರು ಸೇರಿ ಚರ್ಚೆ ನಡೆಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಗಲಭೆಗಳು, ವಿವಿಧ ಕೋಮುಗಳ ನಡುವಿನ ಸಂಘರ್ಷಗಳು ಈ ರಾಜ್ಯಾಂಗ ವ್ಯವಸ್ಥೆ ದಿಕ್ಕು ತಪ್ಪುತ್ತಿರುವುದನ್ನ ಸೂಚಿಸುತ್ತಿವೆ. ಆದರೆ ಅದನ್ನ ನಿಯಂತ್ರಿಸುವ ಕೆಲಸವಾಗುತ್ತಿಲ್ಲ. ಜನಪ್ರತಿನಿಧಿಗಳಾದವರಿಗೆ ನಮ್ಮ ಸಂವಿಧಾನದ ಪ್ರಾಮುಖ್ಯತೆ ತಿಳಿದಿಲ್ಲ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಸಮಗ್ರ ಬದಲಾವಣೆಯನ್ನ ತರುವ ನಿಟ್ಟಿನಲ್ಲಿ ಈ ಬಾರಿ 50 ಮಂದಿ ಸಾಧು-ಸಂತರು ಚುನಾವಣಾ ಕಣಕ್ಕೆ ಸ್ಪರ್ಧಿಸಲು ಸಿದ್ಧರಾಗಿದ್ದೇವೆ. ನಮಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಪ್ರೇರಣೆ ಎಂದು ಉಜಿರೆ ಬ್ರಹ್ಮಾನಂದ ಶ್ರೀ ಹೇಳಿದ್ದಾರೆ.