ಕರ್ನಾಟಕ

karnataka

ETV Bharat / state

20 ವರ್ಷಗಳ ರೈತರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರದಿಂದ ರೈತರಿಗೆ 50 ಲಕ್ಷ ಪರಿಹಾರ - ETV Bharat kannada News

ಮುಡಗೇರಿ ಗ್ರಾಮದ ರೈತರಿಗೆ ಪರಿಹಾರದ ಚೆಕ್‌ನ್ನು ಸಚಿವ ಮುರುಗೇಶ್ ನಿರಾಣಿ ಹಸ್ತಾಂತರಿಸಿದರು.

50 lakh compensation from Govt
ಸರ್ಕಾರದಿಂದ 50 ಲಕ್ಷ ಪರಿಹಾರ

By

Published : Mar 19, 2023, 10:27 PM IST

ಮುಡಗೇರಿ ಗ್ರಾಮದ ರೈತರಿಗೆ ಪರಿಹಾರದ ಚೆಕ್‌ನ್ನು ಸಚಿವ ಮುರುಗೇಶ್ ನಿರಾಣಿ

ಕಾರವಾರ (ಉತ್ತರಕನ್ನಡ ) :ಬರೋಬ್ಬರಿ 20 ವರ್ಷಗಳ ಬಳಿಕ ರೈತರ ಹೋರಾಟಕ್ಕೆ ಮಣಿದ ಸರ್ಕಾರ ಇದೀಗ ಜಮೀನು ಕಳೆದುಕೊಂಡ ರೈತರಿಗೆ ಇದೀಗ ಪ್ರತಿ ಎಕರೆಗೆ 50 ಲಕ್ಷ ಪರಿಹಾರ ನೀಡುತ್ತಿದ್ದು, ಖುದ್ದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯೇ ಪರಿಹಾರದ ಚೆಕ್‌ನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಜಿಲ್ಲೆಯ ಮುಡಗೇರಿ ಗ್ರಾಮದಲ್ಲಿ ಸರ್ಕಾರ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶದಿಂದ ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಸೂಕ್ತ ಪರಿಹಾರ ನಿಗದಿಯಾಗದೇ ಪಾಳು ಬೀಳುವಂತಾಗಿತ್ತು. 1997ರಲ್ಲಿಯೇ ಸರ್ಕಾರ ಮುಡಗೇರಿ ಗ್ರಾಮದಲ್ಲಿ ಕೃಷಿ ಕಾರ್ಯ ಮಾಡಿಕೊಂಡಿದ್ದ ರೈತರ ಸುಮಾರು 73 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿತ್ತು. ಆದರೇ ಪರಿಹಾರದ ವಿಚಾರದಲ್ಲಿ ಹೊಂದಾಣಿಕೆಯಾಗದ ಹಿನ್ನೆಲೆ ಬಹುತೇಕರು ನ್ಯಾಯಾಲಯದ ಮೊರೆ ಹೋಗಿದ್ದರು. ಪರಿಣಾಮ ಫಲವತ್ತಾದ ಕೃಷಿಭೂಮಿ ಯಾವುದಕ್ಕೂ ಬಳಕೆಯಾಗದೇ ಪಾಳು ಬೀಳುವಂತಾಗಿತ್ತು.

50 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ :ರೈತರು ಹೆಚ್ಚುವರಿ ಪರಿಹಾರಕ್ಕಾಗಿ ಆಗ್ರಹಿಸಿ ನ್ಯಾಯಾಲಯ ಮೋರೆ ಹೋದ ಹಿನ್ನಲೆ ಕೈಗಾರಿಕೆಗಳ ಸ್ಥಾಪನೆಯೂ ಆಗದೇ, ರೈತರಿಗೆ ಪರಿಹಾರವೂ ಸಿಗದೇ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿತ್ತು. ಅದರಂತೆ ನ್ಯಾಯಾಲಯದ ಮೊರೆ ಹೋಗಿದ್ದ ರೈತರೊಂದಿಗೆ ಕೊನೆಗೂ ಹೊಂದಾಣಿಕೆ ಮಾಡಿಕೊಂಡ ಸರ್ಕಾರ ರೈತರ ಬೇಡಿಕೆಯಂತೆ ಎಕರೆಗೆ 50 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಈ ನಿಟ್ಟಿನಲ್ಲಿ ಇಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಖುದ್ದು ಮುಡಗೇರಿ ಗ್ರಾಮಕ್ಕೆ ಆಗಮಿಸಿ ರೈತರಿಗೆ ಪರಿಹಾರ ಚೆಕ್‌ನ್ನ ವಿತರಿಸಿದರು.

ಆರ್‌ಟಿಜಿಎಸ್ ಮೂಲಕ ರೈತರಿಗೆ ಪರಿಹಾರ :ಈ ವೇಳೆ ಮಾತನಾಡಿದ ಸಚಿವ ಮುರಗೇಶ ನಿರಾಣಿ 2005ರಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಸಂಬಂಧ ಮುಡಗೇರಿಯಲ್ಲಿ ರೈತರಿಂದ ಪಡೆಯಲಾದ ಭೂಮಿಗೆ 10 ಲಕ್ಷ ಪ್ರತಿ ಎಕರೆಗೆ ನಿಗದಿ ಮಾಡಲಾಗಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ವಿಶೇಷ ಪ್ರಯತ್ನ ನಡೆಸಿದ ಕಾರಣ ಇದೀಗ 50 ಲಕ್ಷ ರೂ ನೀಡಲು ಸರ್ಕಾರ ತಿರ್ಮಾನಿಸಿದೆ. ಇಂದು ಸಾಂಕೇತಿಕವಾಗಿ 50 ಲಕ್ಷ ರೂನಂತೆ ಪರಿಹಾರದ ಚೆಕ್ ವಿತರಣೆ ಮಾಡಲಾಗಿದೆ. ಇನ್ನು ಈ ವಾರದಲ್ಲಿ ಆರ್‌ಟಿಜಿಎಸ್ ಮೂಲಕ ರೈತರಿಗೆ ಪರಿಹಾರ ನೀಡಲಾಗುವುದು ಎಂದರು.

ರೈತರ ನಿರಂತರ ಹೋರಾಟ :ಇನ್ನು ಕಳೆದ 23 ವರ್ಷಗಳಿಂದ ಮುಡಗೇರಿ ಭಾಗದ ರೈತರು ಪರಿಹಾರಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿದ್ದರು. ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ರೈತರಿಂದ ಜಮೀನು ಪಡೆಯುವಾಗ ಗುಂಟೆಗೆ 8,833 ರೂಪಾಯಿ ಹಣ ಕೊಡುವುದಾಗಿ ತಿಳಿಸಿದ್ದು ಇದಕ್ಕೆ ರೈತರು ಒಪ್ಪಿಗೆ ನೀಡಿರಲಿಲ್ಲ. ಎರಡು ಬಾರಿ ಜಿಲ್ಲಾಡಳಿತ ರೈತರೊಂದಿಗೆ ಸಭೆ ನಡೆಸಿ ಪರಿಹಾರದ ಮಾತುಕತೆ ನಡೆಸಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ ಜಿಲ್ಲಾಡಳಿತ ಅಂತಿಮ ಹಂತದ ಮಾತುಕತೆ ನಡೆಸಿ ರೈತರಿಗೆ ಎಕರೆಗೆ 50 ಲಕ್ಷ ಪರಿಹಾರ ಕೊಡಲು ಸಮ್ಮತಿ ನೀಡಿದ್ದು ಅದರಂತೆ ಇಂದು ಸಚಿವ ನಿರಾಣಿ ಸಾಂಕೇತಿಕವಾಗಿ ಚೆಕ್ ವಿತರಿಸಿದರು.

ಕೈಗಾರಿಕೆ ಅಭಿವೃದ್ಧಿಗೆ ಕ್ರಮ :ಇನ್ನು ಈ ಭಾಗದಲ್ಲಿ ಮಿನಿ ಟೆಕ್ಸ್ಟೈಲ್ ಪಾರ್ಕ್, ಹಡಗುಗಳ ಬಿಡಿಭಾಗ ತಯಾರಿಕೆ, ಗ್ರೀನ್ ಹೈಡ್ರೋಜನ್ ತಯಾರಿಸುವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶಗಳಿದೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ಅನುದಾನ ನೀಡಲಿದೆ. ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಬಂದರು, ಏರಪೋರ್ಟ್ ಸಂಪರ್ಕ ಸಾಧ್ಯವಾಗುವುದರಿಂದ ವ್ಯವಹಾರಕ್ಕೆ ಹೆಚ್ಚು ಅನುಕೂಲಕರವಾಗಿದೆ. ಬೆಂಗಳೂರಿನಲ್ಲಿ ನಡೆದ ಗ್ಲೋಬಲ್ ಇನ್ವೆಸ್ಟಮೆಂಟರ್ ಕಾರ್ಯಕ್ರಮದಲ್ಲಿ ಹಲವು ಕಂಪನಿಗಳೊಂದಿಗೆ ಸಹಿ ಮಾಡಲಾಗಿದೆ. ಇದರಿಂದ ಸುಮಾರು 7 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕಾರವಾರದಲ್ಲಿಯೂ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುರಗೇಶ ನೀರಾಣಿ ತಿಳಿಸಿದರು.

ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ಕೆ ಸ್ಥಳೀಯರ ಮೆಚ್ಚುಗೆ :ಎರಡು ದಶಕಗಳ ಬಳಿಕ ಬೇಡಿಕೆಯಿಟ್ಟ ಪರಿಹಾರ ಲಭಿಸಿದ್ದಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಆರಂಭದಲ್ಲಿ ಭೂಮಿ ಕಳೆದುಕೊಂಡು ಕಡಿಮೆ ಪರಿಹಾರ ಪಡೆಯದೆ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದೇವು. ಆದರೆ ಹಲವು ಬಾರಿ ಸಭೆ ನಡೆಸಿದರು ಸಾಧ್ಯವಾಗಿರಲಿಲ್ಲ. ಇದೀಗ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ವಿಶೇಷ ಪ್ರಯತ್ನ ನಡೆಸಿದ್ದು ನಮ್ಮ‌ಜಮೀನಿಗೆ ಬೆಲೆ ಸಿಗುವಂತಾಗಿದೆ. ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕು ಎಂದು ರೈತರ ಪರ ವಕೀಲ ಸಂಜಯ ಸಾಳುಂಕೆ ಆಗ್ರಹಿಸಿದರು.

ಒಟ್ಟಾರೇ ಎರಡು ದಶಕಗಳಿಂದ ಪರಿಹಾರಕ್ಕಾಗಿ ಅಲೆದಾಡುತ್ತಿದ್ದ ರೈತರಿಗೆ ಕೊನೆಗೂ ಹಣ ಕೈಸೇರಿದ್ದು ನೆಮ್ಮದಿ ತಂದಿದ್ದು, ಚೆಕ್ ಪಡೆದ ರೈತರು ಆನಂದಬಾಷ್ಪ ಸುರಿಸಿದ್ದು ಇದಕ್ಕೆ ಸಾಕ್ಷಿ ಎನ್ನುವಂತಾಯಿತು. ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಪ್ರಯತ್ನದ ಫಲವಾಗಿ ಪರಿಹಾರ ಲಭಿಸಿದ ಖುಷಿಯಲ್ಲಿ ರೈತರಿದ್ದು ಆದಷ್ಟು ಬೇಗ ಉತ್ತಮ ಕೈಗಾರಿಕೆಗಳು ಸ್ಥಾಪನೆಯಾಗಲಿ ಅನ್ನೋದು ಎಲ್ಲರ ಆಶಯವಾಗಿದೆ.

ಇದನ್ನೂ ಓದಿ :ಸುನೀಲ್​ ನಾಯ್ಕಗೆ ಸ್ವ ಪಕ್ಷಿಯರಿಂದಲೇ ವಿರೋಧ: ಟಿಕೆಟ್ ನೀಡಿದಲ್ಲಿ ಬೇರೆ ಪಕ್ಷಕ್ಕೆ ಬೆಂಬಲದ ಎಚ್ಚರಿಕೆ!

ABOUT THE AUTHOR

...view details