ಕಾರವಾರ:ರಾಜ್ಯದ ಗಡಿ ಜಿಲ್ಲೆ ಕಾರವಾರದಲ್ಲಿ ಕೈಗಾರಿಕೆಗಳಿಲ್ಲದೆ ಉದ್ಯೋಗ ಅರಸಿ ಯುವಕರು ಗೋವಾದತ್ತ ಪಯಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೈಗಾರಿಕೆಗಳ ಸ್ಥಾಪನೆ ಮಾಡುವಂತೆ ಹಿಂದಿನಿಂದಲೂ ಸರ್ಕಾರದ ಮೇಲೆ ಜನರು ಒತ್ತಡ ಹಾಕುತ್ತ ಬಂದಿದ್ದರು. ಇದೀಗ ಸರ್ಕಾರ ಗಡಿ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಜ್ಜೆ ಇಟ್ಟಿದೆ.
ಕೈಗಾರಿಕೆಗಾಗಿ ಸ್ಥಾಪನೆಗಾಗಿ ಒತ್ತುವರಿ ಮಾಡಿಕೊಂಡಿರುವ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಿದೆ. ಕೈಗಾರಿಕೆ ಅಭಿವೃದ್ಧಿ ಮಂಡಳಿ ಕಾರವಾರ ತಾಲೂಕಿನ ಮುಡಗೇರಿ ಗ್ರಾಮದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು 1997ರಲ್ಲಿಯೇ ರೈತರ ಜಮೀನನ್ನು ವಶಕ್ಕೆ ಪಡೆದಿತ್ತು. ಆದರೆ ಸೂಕ್ತ ಪರಿಹಾರ ಕೊಡದ ಕಾರಣ ಇನ್ನೂ ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಆಗಿರಲಿಲ್ಲ.
ಸದ್ಯ ಕೈಗಾರಿಕೆ ಪ್ರಾರಂಭಕ್ಕೆ ಹೆಜ್ಜೆ ಇಟ್ಟಿರುವ ಜಿಲ್ಲಾಡಳಿತ ಸರ್ವೇ ನಡೆಸಿ ಭೂಮಿಗೆ ಸೂಕ್ತ ಪರಿಹಾರ ಕೊಡುವ ಸಂಬಂಧ ಚರ್ಚೆ ನಡೆಸಿದೆ. ರೈತರ ಬೇಡಿಕೆಯಂತೆ ಎಕರೆ ಜಮೀನಿಗೆ 50 ಲಕ್ಷ ಪರಿಹಾರ ಕೊಡಲು ಸಭೆಯಲ್ಲಿ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ಸುಮಾರು 73 ಎಕರೆ ಪ್ರದೇಶದಲ್ಲಿ ನೌಕಾನೆಲೆಗೆ ಸಂಬಂಧಿಸಿದ ಕೈಗಾರಿಕೆಗಳು ಈ ಪ್ರದೇಶದಲ್ಲಿ ಪ್ರಾರಂಭವಾಗಲಿದೆ.