ಕರ್ನಾಟಕ

karnataka

ETV Bharat / state

ಉತ್ತರಕನ್ನಡದಲ್ಲಿ ಭಾರಿ ಮಳೆಗೆ 437 ಕೋಟಿ ಆಸ್ತಿ ಹಾನಿ.. ಪರಿಹಾರ ವಿತರಣೆಗೆ ಮುಂದಾದ ಜಿಲ್ಲಾಡಳಿತ - ಅನುದಾನದಲ್ಲಿ ಹಣ ಬಿಡುಗಡೆ

ಈ ಬಾರಿ ಶೈಕ್ಷಣಿಕ ಸಂಸ್ಥೆಗಳ ಹಾನಿ ಸರ್ವೇ ಮಾಡಿದ್ದು, 476 ಶಾಲೆಗಳು ಹಾಗೂ 312 ಅಂಗನವಾಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇವುಗಳ ರಿಪೇರಿಗೆ ಇರುವ ಅನುದಾನದಲ್ಲಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Hill collapse due to heavy rains in Uttarkannada
ಉತ್ತರಕನ್ನಡ ಭಾರಿ ಮಳೆಗೆ ಗುಡ್ಡ ಕುಸಿತ

By

Published : Aug 18, 2022, 9:40 AM IST

ಕಾರವಾರ: ಕಳೆದೆರಡು ತಿಂಗಳಿನಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ್ದ ವರುಣ ಇದೀಗ ಕೊಂಚ ಶಾಂತವಾಗಿದ್ದಾನೆ. ನೆರೆ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಜನತೆ ಇದೀಗ ಸಹಜ ಜೀವನದತ್ತ ಮರಳುತ್ತಿದ್ದಾರೆ. ಇದುವರೆಗೆ ಸುರಿದ ಮಳೆಯಿಂದಾಗಿ ಜಿಲ್ಲಾದ್ಯಂತ ಸುಮಾರು 437 ಕೋಟಿಗೂ ಅಧಿಕ ಹಾನಿ ಸಂಭವಿಸಿದ್ದಾಗಿ ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಇದೀಗ ಹಾನಿ ಪರಿಶೀಲಿಸಿ ಪರಿಹಾರ ವಿತರಿಸುವ ಕಾರ್ಯಕ್ಕೆ ಮುಂದಾಗಿದೆ.

ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ ಕೆಲವೆಡೆ ವರುಣ ಅಬ್ಬರಿಸಿದ್ದು, ನೆರೆ ಪ್ರವಾಹಕ್ಕೆ ಕಾರಣವಾಗಿತ್ತು. ಅದರಲ್ಲೂ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ ಭಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದ ಧರೆ ಕುಸಿದು ಒಂದೇ ಕುಟುಂಬದ ನಾಲ್ವರು ದುರಂತ ಸಾವು ಕಂಡಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟುಮಾಡಿತ್ತು. ಇದೀಗ ಮಳೆ ಕಡಿಮೆಯಾಗಿರುವ ಹಿನ್ನೆಲೆ ಜಿಲ್ಲಾಡಳಿತ ಪರಿಹಾರ ಕಾರ್ಯಕ್ಕೆ ಮುಂದಾಗಿದ್ದು ಹಾನಿಯ ಸರ್ವೇ ನಡೆಸುತ್ತಿದೆ.

ಜಿಲ್ಲೆಯಲ್ಲಿ ಜೂನ್ 1 ರಿಂದ ಸುರಿದ ಮಳೆಯಿಂದಾಗಿ 451 ಮನೆಗಳಿಗೆ ಭಾಗಶಃ ಹಾನಿ ಸೇರಿದಂತೆ ಒಟ್ಟು 751 ಮನೆಗಳಿಗೆ ಹಾನಿಯುಂಟಾಗಿದೆ. ಮಳೆಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 95 ಸಾವಿರ ಪರಿಹಾರವನ್ನು ನೀಡಲಾಗುತ್ತಿದ್ದು, ಹೆಚ್ಚಿನ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ 5 ಲಕ್ಷದವರೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ನಿಗದಿಪಡಿಸಿದ್ದು, ಈಗಾಗಲೇ 10 ಸಾವಿರ ರೂಪಾಯಿ ನೀಡಲಾಗಿದೆ. ಉಳಿದ 40 ಸಾವಿರ ರೂಪಾಯಿ ವಿತರಿಸುವ ಕಾರ್ಯ ಜಾರಿಯಲ್ಲಿದೆ.

ಪರಿಹಾರ ವಿತರಣೆಗೆ ಮುಂದಾದ ಜಿಲ್ಲಾಡಳಿ

ಇನ್ನು ಆಗಸ್ಟ್ 1 ಹಾಗೂ 2 ರಂದು ಸುರಿದ ಮಳೆಗೆ ಭಟ್ಕಳವೊಂದರಲ್ಲೇ ಸುಮಾರು 3,890 ಮನೆಗಳಿಗೆ ನೀರು ನುಗ್ಗಿದ್ದು, ಜೂನ್‌ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 6,283 ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿತ್ತು. ನೀರು ನುಗ್ಗಿದ ಮನೆಗಳಿಗೂ ಸಹ 10 ಸಾವಿರ ರೂಪಾಯಿ ಪರಿಹಾರವನ್ನು ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ.

ಜಿಲ್ಲೆಯಲ್ಲಿ ಕಳೆದೆರಡು ತಿಂಗಳು ಸುರಿದ ಮಳೆಯಿಂದಾಗಿ 670 ಕಿಮೀ ಪಿಡಬ್ಲ್ಯೂಡಿ ರಸ್ತೆಗೆ ಹಾನಿಯಾಗಿದ್ದು, ಗ್ರಾಮೀಣ ಪ್ರದೇಶದ 633 ಕಿಮೀ ರಸ್ತೆಗೆ ಹಾನಿಯುಂಟಾಗಿದೆ. ಭಟ್ಕಳ ಪಟ್ಟಣದಲ್ಲಿ ನೆರೆ ಪರಿಸ್ಥಿತಿ ಸೃಷ್ಟಿಯಾಗಿದ್ದರಿಂದಾಗಿ ನಗರ ಪ್ರದೇಶದಲ್ಲಿ ಸುಮಾರು 47 ಕಿಮೀ ರಸ್ತೆ ಹಾಳಾಗಿದ್ದು, ಒಟ್ಟು ಜಿಲ್ಲಾದ್ಯಂತ ರಸ್ತೆಗಳಿಗೆ 55 ಕೋಟಿಯಷ್ಟು ಹಾನಿ ಸಂಭವಿಸಿದೆ.

ಜಿಲ್ಲೆಯಲ್ಲಿ ಭಾರಿ ಹಾನಿ:ಈ ಬಾರಿ ಶೈಕ್ಷಣಿಕ ಸಂಸ್ಥೆಗಳ ಹಾನಿ ಸರ್ವೇ ಮಾಡಿದ್ದು, 476 ಶಾಲೆಗಳು ಹಾಗೂ 312 ಅಂಗನವಾಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಇವುಗಳ ರಿಪೇರಿಗೆ ಇರುವ ಅನುದಾನದಲ್ಲಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಜೂನ್​ನಿಂದ ಇಲ್ಲಿಯವರೆಗೆ 2042 ಮಿಮೀ ಮಳೆಯಾಗಿದ್ದು, ಭಟ್ಕಳ ತಾಲೂಕು ಒಂದರಲ್ಲೇ ಆಗಸ್ಟ್ 2ರಂದು ಬರೋಬ್ಬರಿ 533 ಮಿಮೀ ಮಳೆಯಾಗಿದೆ. ಹಿಂದಿನ ಎಲ್ಲ ದಾಖಲೆಗಳಿಗಿಂತ ಅತ್ಯಧಿಕವಾಗಿದೆ.

ಭಾರಿ ಮಳೆಯಿಂದ ಧರೆ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ ದುರ್ಘಟನೆ ನಡೆದ 24 ಗಂಟೆಗಳೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವುದರೊಂದಿಗೆ ಆರ್ಥಿಕ ಸಹಾಯವನ್ನು ಒದಗಿಸಿದ್ದರು. ಸದ್ಯ ಜಿಲ್ಲೆಯ ಕೆಲವೆಡೆ ಭೂಕುಸಿತ ಆತಂಕ ಎದುರಾಗಿದ್ದು, ಕೇಂದ್ರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಧ್ಯಯನ ನಡೆಸುತ್ತಿದೆ. ಅದು ನೀಡುವ ವರದಿಯನ್ನಾಧರಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ.

ಒಟ್ಟಾರೇ ಜಿಲ್ಲೆಯಲ್ಲಿ ಇದುವರೆಗೆ ಸುರಿದ ಧಾರಾಕಾರ ಮಳೆಗೆ ಸದ್ಯದ ಅಂದಾಜಿನಂತೆ 437.83 ಕೋಟಿಯಷ್ಟು ಹಾನಿ ಸಂಭವಿಸಿದ್ದು, ಇನ್ನೂ ಸಹ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಸದ್ಯ ವರುಣ ಬ್ರೇಕ್ ಕೊಟ್ಟಿದ್ದರಿಂದಾಗಿ ಜನರು ನಿಟ್ಟುಸಿರು ಬಿಡುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತೆ ಮಳೆ ಸುರಿದಲ್ಲಿ ಹಾನಿ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ :ಬಿಟ್ಟು ಬಿಡದೇ ಕಾಡುತ್ತಿರುವ ಮಳೆ.. ಈವರೆಗೆ ನೆರೆ ಸಂತ್ರಸ್ತರಿಗೆ ಸರ್ಕಾರ ಪಾವತಿಸಿದ ಪರಿಹಾರ ಹೀಗಿದೆ

ABOUT THE AUTHOR

...view details