ಕಾರವಾರ: ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜಾಡುತ್ತಿದ್ದ ಮೂವರು ಮಕ್ಕಳು ಅಲೆ ರಭಸಕ್ಕೆ ಕೊಚ್ಚಿ ಹೋಗಿ ಅದೃಷ್ಟವಸಾತ್ ಲೈಫ್ ಗಾರ್ಡ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ತೆರಳಿ ರಕ್ಷಣೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಇಂದು ನಡೆದಿದೆ. ಅಲೆಗೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಮಾರುತಿ (20) ಚಂದನಾ(16) ಮಧುಸೂದನ್ (11) ಎಂಬ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಕುಟುಂಬ ಸಮೇತರಾಗಿ ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿದ್ದವರು ಸಮುದ್ರದಲ್ಲಿ ಈಜಾಡಲು ತೆರಳಿದಾಗ ಮಹಿಳೆ ಸೇರಿ ಮೂರು ಜನ ಸುಳಿಗೆ ಸಿಲುಕಿ ನೀರು ಪಾಲಾಗುವ ಹಂತದಲ್ಲಿದ್ದರೂ ಇದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಮೋಹನ್ ಅಂಬಿಗ, ಶಿವಪ್ರಸಾದ ಅಂಬಿಗ, ಬೀಚ್ ಸುಪ್ರವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ರಘುವೀರ ನಾಯ್ಕ್ ಹಾಗೂ ಗೋಕರ್ಣ ಓಂ ಬೀಚ್ ಟೂರಿಸ್ಟ್ ಬೋಟ್ ಅಸೋಸಿಯೇಷನ್ ಸಿಬ್ಬಂದಿಗಳಾದ ಅಶೋಕ್ ಹೊಸ್ಕಟ್ಟ, ದೀಪಕ್ ಗೌಡ, ಶಶಿಕುಮಾರ್ ಬಿಜಾಪುರ, ಕಮಲಾಕರ ಹೊಸಕಟ್ಟ, ಮಹೇಶ ಹೊಸಕಟ್ಟ, ಸಂದೇಶ ಗಾಬಿತ್, ಚಿದಾನಂದ ಲಕ್ಕುಮನೆ ತಕ್ಷಣ ಸಹಾಯಕ್ಕೆ ತೆರಳಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.
ಮುರುಡೇಶ್ವರದಲ್ಲಿಯೂ ಕೊಚ್ಚಿ ಹೋಗಿದ್ದ ಯುವಕನ ರಕ್ಷಣೆ:ಇನ್ನು ಮುರುಡೇಶ್ವರದ ಮುಖ್ಯ ಕಡಲತೀರದಲ್ಲಿಯೂ ಕೋಲಾರ ಮೂಲದ ಯುವಕನೊಬ್ಬ ನೀರಿನಲ್ಲಿ ಆಟವಾಡುತ್ತಿದ್ದಾಗ ಅಲೆಗೆ ಕೊಚ್ಚಿ ಹೋಗಿದ್ದ ಘಟನೆ ಶನಿವಾರ ನಡೆದಿದೆ. ಕೋಲಾರದ 19 ವರ್ಷದ ಆದೇಶ ರವೀಂದ್ರ ಕೊಚ್ಚಿ ಹೋಗಿದ್ದ ಯುವಕ. ಕುಟುಂಬಸ್ಥರ ಜೊತೆಗೆ ಪ್ರವಾಸಕ್ಕೆ ಆಗಮಿಸಿ ಸಮುದ್ರದಲ್ಲಿ ಆಟ ಆಡುತ್ತಿರುವಾಗ ಒಮ್ಮೇಲೆ ಬಂದ ಅಲೆಗೆ ಕೊಚ್ಚಿ ಹೋಗುತಿದ್ದ.
ತಕ್ಷಣ ಸ್ಥಳದಲ್ಲಿದ್ದ ಕುಟುಂಬಸ್ಥರು ಕೂಡಿಕೊಂಡಿದ್ದಾರೆ. ಈ ವೇಳೆ, ಸ್ಥಳದಲ್ಲಿದ್ದ ಲೈಫ್ ಗಾರ್ಡ್ಗಳಾದ ಪ್ರವೀಣ, ಹನುಮಂತ, ವಿಘ್ನೇಶ್, ಶೇಖರ್ ಎಂಬುವವರು ತಕ್ಷಣ ಸಮುದ್ರಕ್ಕೆ ಈಜಾಡುತ್ತಾ ತೆರಳಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಬಾಲಕ ಇನ್ನೊಂದು ಕ್ಷಣ ತಡವಾಗಿದ್ದು ಅಲೆಗೆ ಕೊಚ್ಚಿ ಹೋಗುತ್ತಿದ್ದ ಸ್ಥಿತಿಯಲ್ಲಿ ಲೈಫ್ ಗಾರ್ಡ್ಗಳು ಜೀವ ಉಳಿಸಿದ್ದು ಪ್ರವಾಸಿಗರು ಕೃತಜ್ಞತೆ ಸಲ್ಲಿಸಿದ್ದಾರೆ.