ಕಾರವಾರ:ಮದುವೆಯಾಗಿ ಐದು ವರ್ಷವಾದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಕಂಡ ದೇವರಿಗೆಲ್ಲ ಹರಕೆ ಕಟ್ಟಿಕೊಂಡ ಬಳಿಕ ಕೊನೆಗೂ ಮೂರು ತಿಂಗಳ ಹಿಂದೆ ಗಂಡು ಮಗು ಜನನವಾಗಿತ್ತು. ದುರದೃಷ್ಟವಶಾತ್ ಕಳೆದ ಮೂರು ದಿನದ ಹಿಂದೆ ಕಫ ಎಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಹಸುಗೂಸನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಸಾಗಿಸಲು ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೇ ಮಗು ಸಾವನ್ನಪ್ಪಿದೆ. ಇದೀಗ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಪಾಲಕರು ಹಾಗೂ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಹೌದು ಕಾರವಾರದ ಕಿನ್ನರ ಮೂಲದ ರಾಜನ್ ಎಂಬ 3 ತಿಂಗಳ ಮಗು ಮಕ್ಕಳ ವೆಂಟಿಲೇಟರ್ ಆಂಬ್ಯುಲೆನ್ಸ್ ಸಿಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದೆ. ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಮೂರು ದಿನಗಳ ಹಿಂದೆ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿನ ಪೀಡಿಯಾಟ್ರಿಕ್ಸ್ ಐಸಿಯೂನಲ್ಲಿ ಹಸುಗೂಸಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕಫದ ಸಮಸ್ಯೆ ಗುಣಮುಖವಾಗದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ಪಾಲಕರು ಕೇಳಿಕೊಂಡಿದ್ದು, ವೈದ್ಯರೂ ಸಹ ಅನುಮತಿ ನೀಡಿದ್ದರು.
ಆದರೆ ಹಸುಗೂಸನ್ನು ಮಕ್ಕಳ ವೆಂಟಿಲೇಟರ್ ಸಹಾಯದಿಂದಲೇ ಕೊಂಡೊಯ್ಯಬೇಕಾದ್ದರಿಂದ ಮಕ್ಕಳ ವೆಂಟಿಲೇಟರ್ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ. ಕೊನೆಗೆ ಉಡುಪಿಗೆ ಕರೆ ಮಾಡಿ ಅಲ್ಲಿಂದನೇ ಆಂಬ್ಯುಲೆನ್ಸ್ ತರಿಸಲಾಗಿತ್ತು. ದುರದೃಷ್ಟವಶಾತ್ ಆಂಬ್ಯುಲೆನ್ಸ್ ಬರುವ ವೇಳೆಗಾಗಲೇ ಹಸುಗೂಸು ಕೊನೆಯುಸಿರೆಳೆದಿದೆ. ಆದರೆ ಈ ಅವ್ಯವಸ್ಥೆ ವಿರುದ್ಧ ಆಕ್ರೋಶಗೊಂಡ ಪಾಲಕರು ಆಸ್ಪತ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಸಿಕ್ಕಿದ್ದರೇ ನಮ್ಮ ಮಗು ಬದುಕುಳಿಯುತ್ತಿತ್ತು. ನಮಗಾದಂತೆ ಮತ್ಯಾರಿಗೂ ಆಗಬಾರದು ಮಕ್ಕಳ ಆಂಬ್ಯುಲೆನ್ಸ್ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಿದರು.