ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 252 ಕನ್ನಡ ಶಾಲೆಗೆ ಮುಚ್ಚುವ ಭೀತಿ ಶಿರಸಿ (ಉತ್ತರಕನ್ನಡ): ಉತ್ತರಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯೊಂದರಲ್ಲೇ 252 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 10ಕ್ಕೂ ಅಧಿಕ ಮಕ್ಕಳಿದ್ದು, ಮುಂದಿನ ದಿನಗಳಲ್ಲಿ ಮುಚ್ಚುವ ಆತಂಕ ಎದುರಾಗಿದೆ.
ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣ ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಕುತ್ತು ಬಂದಿದೆ. ಜೊತೆಗೆ ಗುಣಮಟ್ಟ ಇಲ್ಲವೆಂಬ ನೆಪವೊಡ್ಡಿ ಪಾಲಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಬದಲು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. 2023-24ನೇ ಸಾಲಿನಲ್ಲಿ ಶೈಕ್ಷಣಿಕ ಜಿಲ್ಲೆಯಲ್ಲಿ 8 ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿದೆ. ಜಿಲ್ಲೆಯಲ್ಲಿ ಒಟ್ಟು 620 ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಅದರಲ್ಲಿ 252 ಶಾಲೆಗಳನ್ನು 10ಕ್ಕೂ ಅಧಿಕ ಮಕ್ಕಳಿರುವ ಶಾಲೆಗಳೆಂದು ಗುರುತಿಸಲಾಗಿದೆ.
ಒಂದೊಮ್ಮೆ 5ಕ್ಕಿಂತಲೂ ಕಡಿಮೆ ಮಕ್ಕಳ ಸ್ಥಿತಿ ಉಂಟಾದರೆ ಆಗ ಕನ್ನಡ ಮಾಧ್ಯಮ, ಕನ್ನಡ ಶಾಲೆಗಳು, ಸರ್ಕಾರಿ ಶಾಲೆಗಳು ಮುಚ್ಚಬೇಕಾದ ಪರಿಸ್ಥಿತಿ ಒದಗಿಬಹುದು. ಜೊತೆಗೆ ಈ ವರ್ಷ ಶಿರಸಿಯ ಶಿಂಗನಹಳ್ಳಿ, ಕೊಟ್ಟಿಗೆಹಳ್ಳ, ಸಿದ್ದಾಪುರ ತಾಲೂಕಿನ ಮುಠ್ಠಳ್ಳಿ ಕೋಡ್ಸರ, ಮೂರುರು, ಯಲ್ಲಾಪುರದ ಬಾರಿಗದ್ದೆ, ಬಾಗಿನಕಟ್ಟಾ, ಮೊಟ್ಟೆಗದ್ದೆ ಹಾಗೂ ದಾಂಡೇಲಿಯಲ್ಲಿ ಅನುದಾನ ಶಾಲೆಯನ್ನು ಸಂಪೂರ್ಣ ಮುಚ್ಚಲಾಗಿದೆ. ಇವೆಲ್ಲವೂ ಕಿರಿಯ ಪ್ರಾಥಮಿಕ ಶಾಲೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿಡಿಪಿಐ ಪಿ.ಬಸವರಾಜು ಅವರು, ಉತ್ತರಕನ್ನಡ ಜಿಲ್ಲೆಯಲ್ಲಿ 2023-24ರಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ಕೊರತೆಯಿಂದಾಗಿ ಒಟ್ಟು 8 ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದೇವೆ. ಇಲ್ಲಿನ ಶಿಕ್ಷಕರನ್ನು ಬೇರೆ ಶಾಲೆಗೆ ನೇಮಕ ಮಾಡಲಾಗಿದೆ. ಒಟ್ಟು ಜಿಲ್ಲೆಯಲ್ಲಿ ಕೆಲವು ತಾಲೂಕುಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅಲ್ಲಿ ಅತಿಥಿ ಶಿಕ್ಷರನ್ನು ನೇಮಕ ಮಾಡಿ ಮಕ್ಕಳಿಗೆ ಪಾಠ ಹೇಳಿ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಶಿಕ್ಷಣ ಪ್ರೇಮಿ ಸುಬ್ರಾಯ ಭಟ್ ಬಕ್ಕಳ ಮಾತನಾಡಿ, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಈಗಾಗಲೇ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 8 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದೆ. ಮಕ್ಕಳ ಕೊರತೆಯಿಂದ ಶಾಲೆಗಳು ಮುಚ್ಚಲ್ಪಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇಂದಿನ ಪೋಷಕರು ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ಧಾವಂತದಲ್ಲಿದ್ದಾರೆ. ಇದಕ್ಕೆ ಪೂರಕವಾಗಿ ಗ್ರಾಮೀಣ ಭಾಗದ ಶಾಲೆಗಳು ಅಭಿವೃದ್ಧಿಯಾಗಿಲ್ಲ. ಇದಕ್ಕೆ ಸರ್ಕಾರವು ಇಂಗ್ಲಿಷ್ ಭಾಷಾ ಕಲಿಕೆ ಜೊತೆಗೆ ನುರಿತ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಲು ಮುಖ್ಯವಾಗಿ ಶಾಲೆಗಳ ಮೂಲ ಸೌಕರ್ಯ ಕೊರತೆಯೂ ಕಾರಣವಾಗಿದೆ. ಹಲವು ಕಡೆ ವಾಹನ ಸಂಪರ್ಕ ಇಲ್ಲದೇ ಕಿಮೀ ಗಟ್ಟಲೆ ನಡೆದುಕೊಂಡು ಶಾಲೆಗೆ ಬರುವ ಸ್ಥಿತಿ ಇದೆ. ಇದರಿಂದಾಗಿ ಮಕ್ಕಳ ಪಾಲಕರಿಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವು ಕಾರ್ಯ ಪ್ರವೃತ್ತವಾಗುವುದು ಮುಖ್ಯವಾಗಿದೆ.
ಇದನ್ನೂ ಓದಿ :ಆಧುನಿಕ ಭಾರತದ ನಿರ್ಮಾಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕೊಡುಗೆ ಮಹತ್ವದ್ದು: ರಾಜ್ಯಪಾಲ ಗೆಹ್ಲೋಟ್