ಕಾರವಾರ: 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿಗೆ ಕಾರವಾರ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಕಾರವಾರ ತಾಲೂಕಿನ ಕೋಡಿಬಾಗದ ಸಾಯಿಕಟ್ಟಾ ನಿವಾಸಿ ವಿನೋದ ಬಾಬನಿ ನಾಯ್ಕ ಶಿಕ್ಷೆಗೊಳಪಟ್ಟ ಅಪರಾಧಿ.
ಏನಿದು ಘಟನೆ?
ವಿನೋದ ಬಾಬನಿ ನಾಯ್ಕ ಬಳಿ ಕೆಲಸಕ್ಕೆ ತೆರಳುತ್ತಿದ್ದ ದಂಪತಿಯೊಂದಿಗೆ ಬರುತ್ತಿದ್ದ ಬಾಲಕಿಗೆ ಚಾಕೋಲೇಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡಿ ಸಲುಗೆ ಬೆಳೆಸಿಕೊಂಡಿದ್ದ. 2019ರ ಜುಲೈ 22 ರಂದು ಮಧ್ಯಾಹ್ನ 01: 30ರ ಸಮಯಕ್ಕೆ ಹೊಲದ ಕೆಲಸ ಮಾಡುವ ಸ್ಥಳದಿಂದ ಬಾಲಕಿಯನ್ನು ಊಟ ಮಾಡಿಸಲೆಂದು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸಿದ್ದಾನೆ. ನಂತರ ತಾನು ಒಬ್ಬನೇ ಪ್ರತ್ಯೇಕವಾಗಿ ವಾಸವಾಗಿರುವ ಕೊಣೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದನು.
ಇದನ್ನೂ ಓದಿ:ವಾಹನಗಳ ಸುಳ್ಳು ಲೆಕ್ಕ: ಬೆಂಗಳೂರಲ್ಲಿ ಓಲಾ, ಉಬರ್ ಕಚೇರಿಗಳ ಮೇಲೆ RTO Raid
ಈ ಬಗ್ಗೆ ಬಾಲಕಿಯ ಪೋಷಕರು ಕಾರವಾದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದಿನ ಡಿವೈಎಸ್ಪಿ ಶಂಕರ ಮಾರಿಹಾಳ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಾಜಿ ನಲ್ವಾಡಿ ಅವರು, ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸದರಿ ಬಾಲಕಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಸುಭಾಷ್ ಬೈರನ್ನ ವಾದ ಮಂಡಿಸಿದ್ದರು.