ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಎರಡು ಜಲಾಶಯಗಳು ಭರ್ತಿಯಾಗಿದ್ದು, ಕೊಡಸಳ್ಳಿ ಜಲಾಶಯದ ನೀರನ್ನು ಇಂದು ಕದ್ರಾ ಜಲಾಶಯಕ್ಕೆ ಬಿಡಲಾಗಿದೆ.
ಹೌದು, ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಜಲಾಶಯ ಹಾಗೂ ಕಾರವಾರದ ಕದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದು, ಇಲ್ಲಿನ ಕಾಳಿ ನದಿಗೆ ಕಟ್ಟಲಾದ ಎರಡು ಅಣೆಕಟ್ಟುಗಳು ಭರ್ತಿಯಾಗಿವೆ. ಇಂದು ಕೊಡಸಳ್ಳಿ ಜಲಾಶಯ ಗರಿಷ್ಠ ಮಟ್ಟ 75.50 ಮೀಟರ್ ತಲುಪಿದ ಕಾರಣ ಇಲ್ಲಿನ ಐದು ಗೇಟ್ಗಳ ಮೂಲಕ 0.2 ಟಿಎಂಸಿ ನೀರನ್ನು ಕದ್ರಾ ಡ್ಯಾಂಗೆ ಬಿಡಲಾಗಿದೆ.
ಇದರಿಂದ ಕದ್ರಾ ಜಲಾಶಯ ಕೂಡ ಭರ್ತಿಯಾಗತೊಡಗಿದ್ದು, ಇದರ ಗರಿಷ್ಠ ಮಟ್ಟವು 34.50 ಮೀ.ಗಳಾಗಿದ್ದು ಈಗಾಗಲೇ 33.30 ಮೀ.ನಷ್ಟು ನೀರು ಸಂಗ್ರಹವಾಗಿದೆ. ಅಲ್ಲದೆ ಮಳೆ ಕೂಡ ನಿರಂತರವಾಗಿ ಸುರಿಯುತ್ತಿರುವ ಕಾರಣ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಈ ಕಾರಣದಿಂದ ಆಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರ ಬಿಡುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯ ಕೆಳ ದಂಡೆಯ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು, ತಮ್ಮ ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗಬೇಕು ಎಂದು ಕದ್ರಾ ಅಣೆಕಟ್ಟು ಮತ್ತು ವಿದ್ಯುದಾಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಆದೇಶ ಹೊರಡಿಸಿದ್ದಾರೆ.
ಅಲ್ಲದೆ ಬಹುತೇಕ ಅಣೆಕಟ್ಟು ತುಂಬುವ ಹಂತ ತಲುಪಿದ ಕಾರಣ ಮಳೆ ಮುಂದುವರಿದಲ್ಲಿ ಇಂದು ರಾತ್ರಿ ಇಲ್ಲವೇ ನಾಳೆ ನೀರನ್ನು ಹೊರಕ್ಕೆ ಬಿಡುವ ಸಾಧ್ಯತೆ ಇದೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.