ಕಾರವಾರ: ಗೂಡ್ಸ್ ಕಂಟೇನರ್‌ನಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 19 ಗೂಳಿಗಳನ್ನು ರಕ್ಷಿಸಿದ ಪೊಲೀಸರು ಲಾರಿ ಸಹಿತ ಐವರನ್ನೂ ವಶಕ್ಕೆ ಪಡೆದಿರುವ ಘಟನೆ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಗೇಟ್ ಬಳಿ ನಡೆದಿದೆ.
ಮಹಾರಾಷ್ಟ್ರದ ಜಲಗಾಂವ ಜಿಲ್ಲೆಯ ಮನ್ನಾರ್‌ವಾಡಾದ ವಾಹನ ಚಾಲಕ ಶೇಖ್ ಹಫೀಜ್ ಯಾಕೂಬ್, ತೆಲಂಗಾಣದ ನಾಯಂಕಲ್‌ನ ಮಹ್ಮದುಲ್ ನವಾಜ್, ಮಹ್ಮದ್ ಇಸ್ಮಾಯಿಲ್ ಬಕ್ಕರ್ ಖುರೇಷಿ, ತೆಲಂಗಾಣ ಜಹೀರಾಬಾದ್‌ನ ಮೆಹಬೂಬ್ ಅಲಿ, ಮಹ್ಮದ್ ಖಾಜಾ ಮಿಯಾ, ಹುಬ್ಬಳ್ಳಿ ಕೇಶ್ವಾಪುರದ ರಫೀಕ್ ರಾಜಾಸಾಬ್ ಬೇಪಾರಿ ಹಾಗೂ ಭಟ್ಕಳದ ಅದ್ವಾನ್ ಎಂಬ ಐವರನ್ನೂ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಗೂಡ್ಸ್ ಕಂಟೇನರ್‌ನಲ್ಲಿ 19 ಗೂಳಿಗಳನ್ನು ಹಿಂಸಾತ್ಮಕವಾಗಿ ಸಾಗಣೆಕೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಸುಳಿವು ಪಡೆದು ಕಾರ್ಯಪ್ರವೃತ್ತರಾದ ಹೊನ್ನಾವರ ಪಿಎಸ್‌ಐ ಸಂತೋಷ ಕಾಯ್ಕಿಣಿ, ತಂಡದೊಂದಿಗೆ ಗೇರಸೊಪ್ಪಾ ಪೋಲಿಸ್ ಚೆಕ್‌ಪೋಸ್ಟ್ ಬಳಿ ಕಂಟೇನರ್ ತಡೆದು ತಪಾಸಣೆ ನಡೆಸಿದ್ದಾರೆ. ವೇಳೆ ಕಂಟೇನರ್ ಒಳಗೆ 19 ಗೂಳಿಗಳಿರುವುದು ಪತ್ತೆಯಾಗಿದೆ.
ಕಂಟೇನರ್‌ನಲ್ಲಿಅಕ್ರಮವಾಗಿ ಸಾಗಿಸುತ್ತಿದ್ದ ಗೂಳಿಗಳು.. ವಶಪಡಿಸಿಕೊಂಡ ಪ್ರತೀ ಗೂಳಿಯ ಮೌಲ್ಯ 25 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳು ತೆಲಂಗಾಣ ರಾಜ್ಯದ ವಿವಿಧ ಭಾಗಗಳಿಂದ ಗೂಳಿಗಳನ್ನು ಕಳುವು ಮಾಡಿ ಭಟ್ಕಳ ಮತ್ತು ಕೇರಳಕ್ಕೆ ಮಾಂಸಕ್ಕಾಗಿ ಮಾರಾಟ ಮಾಡಲು ತಂದಿರುವುದಾಗಿ ತಿಳಿದು ಬಂದಿದೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.