ಭಟ್ಕಳ: 40 ದಿನದ ವೀಸಾ ಪಡೆದು ಫೆಬ್ರವರಿ ತಿಂಗಳಲ್ಲಿ ಭಟ್ಕಳದಿಂದ ದುಬೈಗೆ ತೆರಳಿದ್ದ 184 ಜನರನ್ನು ಭಟ್ಕಳ ಮೂಲದ ಉದ್ಯಮಿ ಅತೀಕ್-ಉರ್-ರೆಹಮಾನ್ ಮುನಿರಿ ಮಂಗಳೂರಿಗೆ ಚಾರ್ಟರ್ಡ್ ವಿಮಾನದಲ್ಲಿ ಕರೆ ತಂದಿದ್ದಾರೆ.
ಜೂನ್ 12ರಂದು ದುಬೈನ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಹೊರಟ 184 ಮಂದಿ ಶನಿವಾರ ಮುಂಜಾನೆ 4:20ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಮಂಗಳೂರಿನಿಂದ 4 ಖಾಸಗಿ ಬಸ್ಗಳ ಮೂಲಕ ಭಟ್ಕಳಕ್ಕೆ ಬಂದಿದ್ದಾರೆ.
ಭಟ್ಕಳ ಮೂಲದ 184 ಮಂದಿ ತಾಯ್ನಾಡಿಗೆ ಈ ಮಧ್ಯೆ ಬಸ್ನಲ್ಲಿದ್ದ ಪ್ರಯಾಣಿಕರ ಲಗೇಜ್ಗಳನ್ನು ಬೇರ್ಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಾಡಳಿತ ಮತ್ತು ತಂಝೀಮ್ ಸಂಸ್ಥೆಯ ಸ್ವಯಂ ಸೇವಕರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ದುಬೈನಿಂದಲೇ ಪ್ರಯಾಣಿಕರಿಗೆ ಟೋಕನ್ ನೀಡಿದ್ದು, ಯಾರು ಎಲ್ಲಿ ಕ್ವಾರಂಟೈನ್‍ನಲ್ಲಿರಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ ಭಟ್ಕಳಕ್ಕೆ ಪ್ರಯಾಣಿಕರು ಬಂದ ನಂತರ ಲಗೇಜ್ ವಿಷಯದಲ್ಲಿ ಗೊಂದಲ ಉಂಟಾಗಿದ್ದು, ನಂತರ ಸ್ಥಳಕ್ಕೆ ಬಂದ ತಹಶೀಲ್ದಾರ್ ನಿಗದಿಯಂತೆ ಎಲ್ಲಾ ಪ್ರಯಾಣಿಕರ ಲಗೇಜ್ ಸ್ಯಾನಿಟೈಸಿಂಗ್ ಮಾಡಿ ಸಂಬಂಧಪಟ್ಟವರಿಗೆ ನೀಡಿದರು.
ಬಳಿಕ ನಿಗದಿ ಮಾಡಿದ ಕ್ವಾರಂಟೈನ್ ಸ್ಥಳಕ್ಕೆ ತಲುಪಿಸುವಂತೆ ಸೂಚನೆ ನೀಡಿದರು. ಈ ನಡುವೆ ದುಬೈನಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಇಲ್ಲಿನ ನೀಲಾವರ ಪ್ಯಾಲೇಸ್ ಹೋಟೆಲ್ ಬಳಿ ವ್ಯವಸ್ಥೆ ಮಾಡಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಮತ್ತು ಸಿಪಿಐ, ಅವರನ್ನು ಸಮಾಧಾನ ಮಾಡಿದರು. ಆದರೆ ಸ್ಥಳೀಯರು ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ಕ್ವಾರಂಟೈನ್ ಸ್ಥಳವನ್ನು ಬೇರೆಡೆ ನಿಗದಿ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಓದಿ: ಓರ್ವ ವೃದ್ಧೆಗೆ ಶಿರಸಿಯಲ್ಲಿ ಕೊರೊನಾ ಸೋಂಕು
ಭಟ್ಕಳಕ್ಕೆ ಬಂದಿಳಿದ ಎಲ್ಲಾ ಪ್ರಯಾಣಿಕರನ್ನು ನೇರವಾಗಿ ಕ್ವಾರಂಟೈನ್ ಕೇಂದ್ರಗಳಿಗೆ ತಲುಪಿಸಲಾಗಿದೆ. ಇಲ್ಲಿನ ಹೋಟೆಲ್ ಕೋಲಾ ಪ್ಯಾರಡೈಸ್‍ನಲ್ಲಿ 68 ಮಂದಿ, ನಿಲಾವರ್ ಪ್ಯಾಲೇಸ್ನಲ್ಲಿ 67 ಮತ್ತು ಅಂಜುಮನ್ ಹಾಸ್ಟೆಲ್ನಲ್ಲಿ 49 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿ ಒಟ್ಟು 7 ದಿನ ಕಳೆದ ನಂತರ ಅವರನ್ನು ಮನೆಗಳಿಗೆ ಕಳುಹಿಸಲಾಗುವುದು ಎಂದು ತಿಳಿದು ಬಂದಿದೆ.
ಇವರೆಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ಎಸ್.ರವಿಚಂದ್ರ ತಿಳಿಸಿದ್ದಾರೆ.