ಕಾರವಾರ (ಉತ್ತರ ಕನ್ನಡ): ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಶನಿವಾರ ರಾತ್ರಿ ಮೀನುಗಾರರು ಸಾಂಪ್ರದಾಯಿಕ ಏಂಡಿ ಮೀನುಗಾರಿಕೆ ನಡೆಸುತ್ತಿದ್ದಾಗ 15.9 ಕೆ.ಜಿ ತೂಕದ ಅಪರೂಪದ ಕುಡಗೇರಿ ಮೀನು ಬಲೆಗೆ ಬಿದ್ದಿದೆ. ಸಾಮಾನ್ಯವಾಗಿ ಸಣ್ಣ ಮೀನುಗಳು ಸಿಗುವ ಏಂಡಿ ಮೀನುಗಾರಿಕೆಯಲ್ಲಿ ಬೃಹತ್ ಗಾತ್ರದ ಮೀನು ಕಂಡು ಮೀನುಗಾರರೇ ಅಚ್ಚರಿಗೊಂಡರು. ಭಾನುವಾರ ಬೆಳಿಗ್ಗೆ ವಾಯು ವಿಹಾರಕ್ಕೆಂದು ಕಡಲ ತೀರಕ್ಕೆ ಬಂದವರು ದೊಡ್ಡ ಗಾತ್ರದ ಮೀನು ಕಂಡು ಫೋಟೋ ಕ್ಲಿಕ್ಕಿಸಿಕೊಂಡರು. ಈ ಮೀನನ್ನು ಕೆ.ಜಿಗೆ 500 ರೂಪಾಯಿಯಂತೆ ಸ್ಥಳೀಯ ಹೊಟೇಲ್ ಒಂದಕ್ಕೆ ಮಾರಾಟ ಮಾಡಲಾಗಿದೆ ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.
ಸಾಲಾಗಿ ರಸ್ತೆ ದಾಟಿದ ಗಜಪಡೆ: ಎರಡು ಮರಿಗಳನ್ನು ಒಳಗೊಂಡ ಆನೆಗಳ ಹಿಂಡೊಂದು ಒಂದರ ಹಿಂದೆ ಒಂದರಂತೆ ಸಾಲಾಗಿ ರಸ್ತೆ ದಾಟುವ ದೃಶ್ಯ ದಾಂಡೇಲಿ ಕುಳಗಿ-ಭಾಗವತಿ ಮಾರ್ಗದಲ್ಲಿ ಕಂಡುಬಂತು. ಎರಡು ಮರಿಗಳು ಸೇರಿ ಒಟ್ಟು 10 ಆನೆಗಳು ರಸ್ತೆ ದಾಟುತ್ತಿದ್ದು ಗಜಪಡೆಯ ಗುಂಪಿನ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಆನೆ ಹಿಂಡು ಸಾಲಾಗಿ ರಸ್ತೆ ದಾಟುವ ತನಕ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಅಲ್ಲಿಯೇ ನಿಂತು ಬಳಿಕ ತೆರಳಿದರು. ಒಂದರ ಹಿಂದೆ ಒಂದರಂತೆ ಪರೇಡ್ ನಡೆಸಿರುವ ಆನೆಗಳು ಆಹಾರ ಅರಸಿ ಬೇರೆ ಕಡೆಗೆ ತೆರಳುತ್ತಿದ್ದವು ಎನ್ನಲಾಗಿದೆ. ಈ ಭಾಗದಲ್ಲಿ ಆನೆಗಳು ಕಾಣ ಸಿಗುವುದು ಹೊಸದೇನಲ್ಲ. ಆಗಾಗ ಒಂಟಿ ಆನೆ ಸೇರಿದಂತೆ ಈ ರೀತಿ ಗಡಪಡೆ ಕಂಡುಬರುತ್ತದೆ ಎಂದು ಸ್ಥಳೀಯರು ತಿಳಿಸಿದರು.