ಕರ್ನಾಟಕ

karnataka

ETV Bharat / state

ಸಿದ್ದಾಪುರದಲ್ಲಿ ಕೋವಿಡ್​ ಗೆದ್ದ ಒಂದೇ ಕುಟುಂಬದ 13 ಮಂದಿ: ಇವರು ಮಾಡಿದ್ದೇನು ಗೊತ್ತಾ?

ಕೊರೊನಾ ಸೋಂಕಿನಿಂದ ಗೆದ್ದು ಬಂದ ಇಡೀ ಕುಟುಂಬ ಜನರಿಗೆ ಧೈರ್ಯ ತುಂಬುತ್ತಿದೆ. ಕೊರೊನಾ ಸೋಂಕಿಗೆ ಹೆದರಬೇಡಿ ಎಂದು ಸಲಹೆ ನೀಡುತ್ತಿದೆ.

13 members from same family won fight against covid
ಕೋವಿಡ್​ ಗೆದ್ದ ಒಂದೇ ಕುಟುಂಬದ 13 ಮಂದಿ..

By

Published : May 13, 2021, 10:21 AM IST

Updated : May 13, 2021, 12:56 PM IST

ಕಾರವಾರ:ಮಹಾಮಾರಿ ಕೊರೊನಾಗೆ ದೇಶವೇ ತತ್ತರಿಸಿ ಹೋಗಿದೆ. ದೇಹ ಸೇರಿಕೊಂಡು ವಾರಗಳ ಕಾಲ ಗೊತ್ತಾಗದ ವಿಚಿತ್ರ ಸೋಂಕಿಗೆ ಜನ ಕಂಗಾಲಾಗಿದ್ದಾರೆ. ಆದರೆ ಇಲ್ಲೊಂದು ರೈತಾಪಿ ಕುಟುಂಬ ಮನೆಯಲ್ಲಿ ಮದುವೆ ಸಂಭ್ರಮದಲ್ಲಿರುವಾಗಲೇ 13 ಮಂದಿಗೆ ವಕ್ಕರಿಸಿದ್ದ ಮಹಾಮಾರಿಯನ್ನ ಸದ್ದಿಲ್ಲದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ಮೂಲಕ ಸೋಂಕು ಗೆದ್ದು ಇಡೀ ಕುಟುಂಬ ಇತರರಿಗೆ ಮಾದರಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹುತ್ಗಾರ್ ಗ್ರಾಮದ ದತ್ತಾತ್ರೇಯ ಬೀರಾ ಗೌಡ ಎಂಬುವವರ ರೈತಾಪಿ ಕುಟುಂಬದ 13 ಮಂದಿ ಸದಸ್ಯರು ಕೊರೊನಾ ಸೋಂಕು ತಗುಲಿ ಸಂಕಷ್ಟಕ್ಕೆ ಸಿಲುಕಿದ್ದರು. ಮೊದಲು ಮನೆಯ ಒಂದಿಬ್ಬರಲ್ಲಿ ಜ್ವರ ಕಾಣಿಸಿಕೊಂಡಿತ್ತಾದರೂ ಮನೆಯಲ್ಲಿ ಎರಡೆರಡು ಮದುವೆ ತಯಾರಿಯಲ್ಲಿದ್ದ ಕುಟುಂಬದ ಸದಸ್ಯರಿಗೆ ಜ್ವರ ಬಂದಿರುವುದು ಲೆಕ್ಕಕ್ಕೆ ಇಲ್ಲದಂತಾಗಿತ್ತು.

ಆದರೆ ಎರಡ್ಮೂರು ದಿನ ಕಳೆದರೂ ಜ್ವರ ಕಡಿಮೆಯಾಗದ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಬಳಿಕ ಮನೆಮಂದಿಯೆಲ್ಲ ಪರೀಕ್ಷೆ ಮಾಡಿಸಿದ್ದು, ಸೋಂಕಿನ ಲಕ್ಷಣವೇ ಇಲ್ಲದ 9 ಮಂದಿಗೆ ಸೋಂಕು ಇರುವುದು ಪರೀಕ್ಷೆ ವೇಳೆ ದೃಢಪಟ್ಟಿತ್ತು. ಅದರಲ್ಲಿ 7 ವರ್ಷದ ಬಾಲಕಿ ಕೂಡ ಸೇರಿದ್ದಳು. ಬಳಿಕ ವೈದ್ಯರ ಸಲಹೆಯಂತೆ ಕೊಟ್ಟ ಮಾತ್ರೆ ಸೇವಿಸುತ್ತಾ ಯಾರ ಸಂಪರ್ಕಕ್ಕೂ ಬಾರದೆ ಮನೆಯಲ್ಲಿದ್ದ ಕುಟುಂಬದ ಸದಸ್ಯರು ಇದೀಗ ಸಂಪೂರ್ಣ ಗುಣಮುಖವಾಗಿದ್ದಾರೆ.

ಕೊರೊನಾ ಗೆದ್ದ ಕುಟುಂಬ...

ಕುಟುಂಬಕ್ಕೆ ಕೊರೊನಾ ಬಂದಿರುವುದು ಊರಲ್ಲಿ ಅಪಪ್ರಚಾರಕ್ಕೂ ಕಾರಣವಾಗಿತ್ತಂತೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕುಟುಂಬದ 13 ಮಂದಿ ಸದಸ್ಯರು ಚಿಕಿತ್ಸೆ ಪಡೆದ ವಾರದಲ್ಲಿಯೇ ಗುಣಮುಖರಾಗಿ 14 ದಿನದ ಕ್ವಾರಂಟೈನ್ ಕೂಡ ಮುಗಿಸಿದ್ದಾರೆ. ಅಲ್ಲದೆ ಇಂದು (ಮೇ. 13) ನಡೆಯಬೇಕಿದ್ದ ಮದುವೆಯನ್ನು ಅನಿವಾರ್ಯವಾಗಿ ಮುಂದೂಡಿದ್ದಾರೆ.

ಕೊರೊನಾಗೆ ಯಾರೂ ಭಯ ಪಡುವ ಅಗತ್ಯ ಇಲ್ಲ. ಯಾರೋ ಏನೋ ಹೇಳುತ್ತಾರೆ ಎಂಬ ಹಿಂಜರಿಕೆ ಕೂಡ ಬೇಡ. ಜ್ವರ, ಕೆಮ್ಮು ಹೀಗೆ ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ ಒಮ್ಮೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ. ಇದರಿಂದ ನಿಮ್ಮ ಕುಟುಂಬಕ್ಕೆ ಒಳಿತು ಎನ್ನುತ್ತಾರೆ ಕುಟುಂಬದ ಹಿರಿಯ ಸದಸ್ಯೆ ಮಹಾದೇವಿ.

ಒಟ್ಟಾರೆ ರೋಗ ಲಕ್ಷಣಗಳು ಇದ್ದರೂ ಅದೆಷ್ಟೋ ಮಂದಿ ಕೊರೊನಾಗೆ ಹೆದರಿ ಮನೆಯಲ್ಲಿಯೇ ಇದ್ದು, ಕೊನೆ ಘಳಿಗೆಯಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಆದರೆ ಹೀಗೆ ಮಾಡಿ ಆಪತ್ತು ತಂದುಕೊಳ್ಳುವ ಬದಲು ಈ ರೈತಾಪಿ ಕುಟುಂಬದ ಸದಸ್ಯರಂತೆ ರೋಗ ಲಕ್ಷಣ ಕಂಡ ತಕ್ಷಣ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದು ಮುಂದಾಗುವ ಅನಾಹುತ ಹಾಗೂ ಇತರರಿಗೆ ರೋಗ ಹರಡುವುದನ್ನ ತಪ್ಪಿಸಬಹುದಾಗಿದೆ.

ಓದಿ:ನಿನ್ನೆ ದೇಶದಲ್ಲಿ ಕೋವಿಡ್ ಸುನಾಮಿಗೆ 4,120 ಮಂದಿ ಬಲಿ: 3.62 ಲಕ್ಷ ಸೋಂಕಿತರು ಪತ್ತೆ

Last Updated : May 13, 2021, 12:56 PM IST

ABOUT THE AUTHOR

...view details