ಕಾರವಾರ: ದೇಶ ಸ್ವಾತಂತ್ರ್ಯಗೊಂಡ ನಂತರ ನಮ್ಮದೇ ಸಂವಿಧಾನ ರಚನೆಗೊಂಡಿದೆ. ಈ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ಬಿಗಿ ಕಾನೂನುಗಳೊಂದಿಗೆ ನ್ಯಾಯ ಒದಗಿಸಲಾಗುತ್ತಿದೆ. ಇಷ್ಟಾದರೂ ಕೂಡ ಇಲ್ಲೊಂದು ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರವೆಂಬ ಪಿಡುಗು ಜೀವಂತವಾಗಿದ್ದು, ಅಧಿಕಾರಿಗಳು, ಪೊಲೀಸರ ಗಮನಕ್ಕೆ ಬಂದರೂ ಪರಿಹಾರ ಕಾಣದೇ 12 ಕುಟುಂಬಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಕುಮಟಾದಲ್ಲಿ 12 ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ; ಅಧಿಕಾರಿಗಳ ಗಮನಕ್ಕೆ ಬಂದರೂ ನಿಲ್ಲದ ಪಿಡುಗು - Kumata
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ಗ್ರಾಮಸ್ಥರ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಳಿ ಬಂದಿದೆ.
ಹೌದು, ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಎಣ್ಣೆಮಡಿಯ 12 ಕುಟುಂಬಗಳು ಕಳೆದ ಒಂದು ವರ್ಷದಿಂದ ತಮ್ಮದೇ ಸಮುದಾಯದವರಿಂದ ಬಹಿಷ್ಕಾರಕ್ಕೊಳಗಾಗಿವೆ. ವರ್ಷದ ಹಿಂದೆ ಹಳ್ಳೇರ ಜಾತಿಯ ಯಜಮಾನ, ಹಕ್ಕುದಾರ ಹಾಗೂ ಮುಖಂಡರ ಆಣತಿಯಂತೆ ಕೆಲವರು ಕಾಡು ಪ್ರಾಣಿ ಬೇಟೆಯಾಡಿ ಪ್ರಾಣಿಯನ್ನು ಕೊಂದು ಹಾಕಿದ್ದರು ಎನ್ನಲಾಗಿದೆ.ಈ ಕುರಿತು ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣ ದಾಖಲಾಗಲು ಗ್ರಾಮದ ಸೀತೆ ಹಳ್ಳೇರ ಹಾಗೂ ಅವರ ಮನೆಯ ಜನರೇ ಕಾರಣ ಎಂದು ಅವರ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆಯೂ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣ ವಿಕೋಪಕ್ಕೆ ತಿರುಗಿ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಭೆ ನಡೆಸಿದ್ದರು. ಇಷ್ಟಾದರೂ ಊರಿನ ಯಜಮಾನ ಹಾಗೂ ಇತರರು ನಮ್ಮ ಕುಟುಂಬ ಹಾಗೂ ದಾಯಾದಿಗಳ ಒಟ್ಟು 12 ಮನೆಗಳಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ ಎಂದು ಕುಟುಂಬದ ಹಿರಿಯರಾದ ಮಂಜುನಾಥ ಸೋಮಯ್ಯ ಹಳ್ಳೇರ್ ಆರೋಪಿಸಿದ್ದಾರೆ.
ಇನ್ನು ಗ್ರಾಮದಲ್ಲಿ ಈ 12 ಮನೆಗಳ ಹೊರತಾಗಿ ಹಳ್ಳೇರ ಸಮುದಾಯದ 80ಕ್ಕೂ ಹೆಚ್ಚು ಮನೆಗಳಿವೆ. ಆದರೆ ಗ್ರಾಮದ ಯಾರೊಬ್ಬರು ಈ ಮನೆಗಳ ಜನರೊಂದಿಗೆ ಒಡನಾಟ ಇಲ್ಲವೇ ಮನೆಗೆ ತೆರಳುವಂತಿಲ್ಲ. ಒಂದೊಮ್ಮೆ ತಪ್ಪಿದರೇ ಅಂತಹ ಕುಟುಂಬಗಳಿಗೂ ಬಹಿಷ್ಕಾರ ಹಾಕಲಾಗುತ್ತದೆ. ಯಾರಾದರೂ ಮಾತಾಡಿದರೆ 500 ರೂ ದಂಡ ವಸೂಲಿ ಮಾಡಲಾಗುತ್ತದೆ. ಊರಿನ ಅಂಗಡಿಗಳಿಗೆ ತೆರಳಿದರೆ ದಿನಸಿ ಸಾಮಾನುಗಳನ್ನು ನೀಡುತ್ತಿಲ್ಲ. ಯಾರಾದರೂ ಸತ್ತರೆ ಶವಸಂಸ್ಕಾರಕ್ಕೆ ಆಗಮಿಸುವುದಿಲ್ಲ. ಅಲ್ಲದೆ ಈ 12 ಕುಟುಂಬಗಳ ಮಕ್ಕಳೊಂದಿಗೆ ಇತರೆ ಕುಟುಂಬದ ಮಕ್ಕಳು ಬೆರೆಯದಂತೆ ಎಚ್ಚರಿಸಲಾಗುತ್ತಿದೆ. ಯಾವುದಾದರೂ ಪುಸ್ತಕ ಇಲ್ಲವೇ ನೋಟ್ಸ್ ಬೇಕಾದಲ್ಲಿ ನೀಡುವುದಿಲ್ಲ. ಇದರಿಂದ ಮಕ್ಕಳು ಶಾಲೆಗೆ ತೆರಳಲು ಹಿಂಜರಿಯುತ್ತಿದ್ದಾರೆ. ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಹಿಷ್ಕಾರದಿಂದ ಸಾಕಷ್ಟು ಯಾತನೆ ಅನುಭವಿಸುತ್ತಿದ್ದು ಕೂಡಲೇ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.