ಕಾರವಾರ: ಒಂದು ಸಾವಿರ ವರ್ಷ ಪೂರೈಸಿದ ಭಟ್ಕಳದ ಜಮಾತುಲ್ ಮುಸ್ಲಿಮೀನ್ ಸಂಸ್ಥೆಯ ಸಹಸ್ರ ಶತಮಾನೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದು ಹಿಂದೂ-ಮುಸ್ಲಿಮರ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೂಡಲಸಂಗಮದ ಬಸವಧರ್ಮಪೀಠದ ಬಸವಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವು ಹಿಂದೂ ಮುಖಂಡರು ಸೌಹಾರ್ದತೆಯ ಭಾಗವಾಗಿ ಮಸೀದಿಗೆ ಭೇಟಿ ನೀಡಿ ಮುಸ್ಲಿಮರ ಪ್ರಾರ್ಥನೆ ವೀಕ್ಷಿಸಿದರು. ವ್ಯಾಪಾರಕ್ಕಾಗಿ ಅರಬ್ ದೇಶದಿಂದ ಹಡಗುಗಳ ಮೂಲಕ ಆಗಮಿಸಿದ ಮುಸ್ಲಿಂ ಸಮುದಾಯದವರು ಭಟ್ಕಳದಲ್ಲಿ ನೆಲೆಸಿ ಬಳಿಕ ಆರಂಭಿಸಿದ್ದ ಜಮಾತುಲ್ ಮುಸ್ಲಿಮೀನ್ ಭಟ್ಕಳ ಸಂಸ್ಥೆಯೂ ಇದೀಗ ಸಾವಿರ ವರ್ಷ ಪೂರೈಸಿದೆ.
ಈ ಹಿನ್ನೆಲೆಯಲ್ಲಿ ಭಟ್ಕಳ ಪಟ್ಟಣದ ಚಿನ್ನದಪಳ್ಳಿಯ ಮಸೀದಿ ಬಳಿ ಆಯೋಜಿಸಿದ್ದ ಸಹಸ್ರಮಾನೋತ್ಸವ ಕಾರ್ಯಕ್ರಮದಲ್ಲಿ ಉಭಯ ಸಮುದಾಯದ ಧಾರ್ಮಿಕ ಗುರುಗಳು ಹಾಗೂ ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು. ಅಲ್ಲದೇ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೂಡಲಸಂಗಮದ ಬಸವ ಧರ್ಮಪೀಠದ ಬಸವಪ್ರಕಾಶ ಸ್ವಾಮೀಜಿ, ಮಾಜಿ ಶಾಸಕ ಜೆ.ಡಿ.ನಾಯ್ಕ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಸಮುದಾಯದವರ ಪ್ರಾರ್ಥನೆ ವೀಕ್ಷಣೆ ಮಾಡಿದರು.
ಬಳಿಕ ಮಾತನಾಡಿದ ಸ್ವಾಮೀಜಿ, 'ದೇಶ ವಿಶ್ವಗುರುವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಕೂಡ ವಿಶ್ವಗುರು ಆಗಿಲ್ಲ. ಹಿಂದೂ-ಮುಸ್ಲಿಂ ಸಮುದಾಯದವರು ಸೌಹಾರ್ದಯುತವಾಗಿ ಬದುಕಿದಾಗ ಅದು ಸಾಧ್ಯವಾಗಲಿದೆ. ರಾಜಕೀಯ ನಾಯಕರುಗಳು ತಮ್ಮ ಲಾಭಕ್ಕೋಸ್ಕರ ಧರ್ಮ ಧರ್ಮಗಳ ನಡುವೆ ಸುಳ್ಳು ಪ್ರಚಾರ ಮಾಡುತ್ತಾರೆ. ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಇದೆಲ್ಲವನ್ನು ಬಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಬೇಕು' ಎಂದು ಹೇಳಿದರು.
ಇದನ್ನೂ ಓದಿ:ಮುಸ್ಲಿಂರಿಂದ ಗಣೇಶೋತ್ಸವ ಆಚರಣೆ.. ಕೋಮು ಸೌಹಾರ್ದತೆ ಮೆರೆದ ಚೌತಿ ಹಬ್ಬ