ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಭತ್ತದ ಬೇಸಾಯ ಮಾಡುವ ಕೃಷಿ ಕ್ರಾಂತಿ ನಡೆಸಲಾಗುತ್ತಿದೆ.
ಕೊರೊನಾ ಹಿನ್ನೆಲೆಯಲ್ಲಿ ಪಟ್ಟಣದಲ್ಲಿದ್ದ ಅದೆಷ್ಟೋ ಯುವಕರು ಊರಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಉಡುಪಿಯ ಮೂಡುಪೆರಂಪಳ್ಳಿಯ ಶೀಂಭ್ರಾ ಎಂಬಲ್ಲಿ ವ್ಯವಸಾಯ ಮಾಡದೆ ಹಡಿಲು ಬಿದ್ದಿದ್ದ ಭೂಮಿಯನ್ನು ಕೃಷಿ ಮಾಡಲು ವಿದ್ಯಾವಂತ ಯುವಕರು ಮುಂದಾಗಿದ್ದಾರೆ.
6 ಎಕರೆಗೂ ಹೆಚ್ಚು ಭೂಮಿಯಲ್ಲಿ ಭತ್ತದ ನಾಟಿ ಮಾಡಿದ ಯುವಕರು ಈ ಯುವಕರ ಗುಂಪಿನಲ್ಲಿರುವವರು ಒಂದೊಂದು ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದಾರೆ. ಹಡಿಲು ಭೂಮಿಯಲ್ಲಿ ಕ್ರಿಕೆಟ್, ಫುಟ್‌ಬಾಲ್ ಆಡುತ್ತಿದ್ದ ಯುವಕರಿಗೆ ಬೇಸಾಯ ಯಾಕೆ ಮಾಡಬಾರದು ಎನ್ನುವ ಯೋಚನೆ ಹೊಳೆದಿತ್ತಂತೆ. ಹೀಗಾಗಿ ಸುಮಾರು 6 ಎಕರೆಗೂ ಹೆಚ್ಚು ಭೂಮಿಯಲ್ಲಿ ಭತ್ತ ಬೆಳೆಯಲು ಮುಂದಾಗಿದ್ದಾರೆ. ಯುವಕರ ಈ ಕೃಷಿ ಕ್ರಾಂತಿಗೆ ಗ್ರಾಮಸ್ಥರು ಸಹ ಕೈ ಜೋಡಿಸಿದ್ದು, ಸಂತಸದಿಂದ ಕೆಸರು ಗದ್ದೆಗಿಳಿದು ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಕರಾವಳಿಯಲ್ಲಿ ಹೊಸದೊಂದು ಕೃಷಿ ಕ್ರಾಂತಿಗೆ ಹೆಜ್ಜೆ ಇಟ್ಟಿರುವ ಯುವಕರು ಯಶಸ್ವಿಯಾಗಲಿ ಎನ್ನುವುದು ನಮ್ಮ ಆಶಯ.