ಉಡುಪಿ:ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ಮೂಡುಗಿಳಿಯಾರಿನ ಯೋಗಬನದ ಪ್ರಕೃತಿ ಮಡಿಲಲ್ಲಿ ತಲೆ ಎತ್ತಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸೆ (ಸರ್ವಕ್ಷೇಮ) ಆಸ್ಪತ್ರೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.
ಡಿವೈನ್ ಪಾರ್ಕ್ ಟ್ರಸ್ಟ್ನ ಅಂಗಸಂಸ್ಥೆಯಾದ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆಯವರು, "ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಇಂದಿನ ಅಗತ್ಯವಾಗಿದೆ. ನಿಸರ್ಗದ ಮಡಿಲಲ್ಲಿ ಆಸ್ಪತ್ರೆ ಇರುವುದರಿಂದ ಇಲ್ಲಿ ದೊರೆಯುವ ಚಿಕಿತ್ಸೆ ಹೆಚ್ಚು ಪ್ರಯೋಜನಕಾರಿಯಾಗಿದೆ. ವಾಸ್ತುಶಿಲ್ಪ ಹಾಗೂ ಪ್ರಾಚೀನ ಶೈಲಿಯಿಂದಾಗಿ ಆಸ್ಪತ್ರೆ ಪ್ರಕೃತಿಗೆ ಹತ್ತಿರವಾಗಿದೆ. ಪರಿಸರಸ್ನೇಹಿ ವಸ್ತುಗಳನ್ನು ಬಳಕೆ ಮಾಡಿಕೊಂಡಿರುವುದು ಇದರ ಹೆಮ್ಮೆ ಎಂದರು.
ಇನ್ನು ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಹೆಚ್.ಆರ್.ನಾಗೇಂದ್ರ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈನ್‍ಪಾರ್ಕ್ ಟ್ರಸ್ಟ್ನ ಆಡಳಿತ ನಿರ್ದೇಶಕರು ಮಾತನಾಡಿ, "ಶಾಂತಿ, ನೆಮ್ಮದಿ ಅರಸುವವರಿಗೆ ಇದು ಸೂಕ್ತ ಜಾಗ. ಪ್ರಕೃತಿ ಚಿಕಿತ್ಸೆ ಇವತ್ತು ವಿಶ್ವಾದ್ಯಂತ ಪಸರಿಸಿದೆ. ಇದಕ್ಕೆ ಕಾರಣ ನಮ್ಮ ಪ್ರಕೃತಿಯಲ್ಲಿಯೇ ಇರುವ ಔಷಧಿ ಗುಣ. ನಾವು ಇದನ್ನು ಬೆಳೆಸಿ ಉಳಿಸಬೇಕಿದೆ ಎಂದರು.