ಉಡುಪಿ:ಉಡುಪಿಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವು ಪ್ರಕರಣವನ್ನು ಸಿಓಡಿಗೆ ಒಪ್ಪಿಸುವಂತೆ ಮನವಿ ಮಾಡಲಾಗುವುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ರಕ್ಷಾ ಸಾವಿನ ಬಗ್ಗೆ ಸಾಕಷ್ಟು ಗೊಂದಲವಿದೆ. ಮಿಷನ್ ಆಸ್ಪತ್ರೆಯ ಚಿಕಿತ್ಸೆಯ ಬಗ್ಗೆ ಅನುಮಾನವಿದೆ. ಆಸ್ಪತ್ರೆಯ ವೈದ್ಯರು ತಪ್ಪೆಸಗಿರುವ ಆರೋಪಗಳು ಕೇಳಿ ಬರುತ್ತಿವೆ. ಗೃಹ ಸಚಿವರು ಈ ಬಗ್ಗೆ ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ನಾನು ಈ ಪ್ರಕರಣವನ್ನು ಸಿಓಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದೇನೆ ಎಂದರು.
ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಒಪ್ಪಿದ್ದಾರೆ. ಸೂಕ್ತ ರೀತಿಯ ತನಿಖೆ ಮಾಡಿ ವರದಿ ನೀಡುವಂತೆ ಗೃಹ ಸಚಿವ ಬೊಮ್ಮಾಯಿ ಆದೇಶ ನೀಡಿದ್ದಾರೆ. ಈ ಪ್ರಕರಣದ ತನಿಖೆಗೆ ಮೆಡಿಕಲ್ ಬೋರ್ಡ್ ರಚನೆಗೆ ಆದೇಶ ಮಾಡಲಾಗಿದೆ ಎಂದು ಶಾಸಕ ಭಟ್ ತಿಳಿಸಿದರು.
ವೈದ್ಯಕೀಯ ರಂಗಕ್ಕೆ ಸಂಬಂಧಿಸಿದ ಪ್ರಕರಣ ತನಿಖೆಗೆ ಮೆಡಿಕಲ್ ಬೋರ್ಡ್ ರಚಿಸುವಂತೆ ಡಿಜಿಪಿ ಸಲಹೆ ನೀಡಿದ್ದಾರೆ. ಡಾ. ಚಂದ್ರಶೇಖರ ಅಡಿಗ, ಡಾ. ಅಜಿತ್ ಶೆಟ್ಟಿ, ಡಾ. ಉದಯ ಶಂಕರ್, ಡಾ. ರಾಮರಾವ್, ಡಾ. ಉಮೇಶ್ ಪ್ರಭು, ಡಾ. ಸ್ಮಿತಾ ಶೆಣೈ, ಡಾ. ನಾಗರತ್ನ ಈ ಬೋರ್ಡಿಗೆ ಸದಸ್ಯರಾಗಿದ್ದಾರೆ. ಐದು ದಿನದೊಳಗೆ ಈ ಬೋರ್ಡ್ ವರದಿ ನೀಡಲಿದೆ. ಮಿಷನ್ ಆಸ್ಪತ್ರೆಯ ಚಿಕಿತ್ಸೆಯ ಮೇಲೆ ಸೂಕ್ತ ತನಿಖೆ ನಡೆಯಲಿದೆ. ಶವ ಅದಲು ಬದಲು ಪ್ರಕರಣದ ಬಗ್ಗೆಯೂ ತನಿಖೆ ನಡೆಯಲಿದೆ. ಈ ಬಗ್ಗೆ ಸಂಬಂಧಪಟ್ಟ ನೌಕರರಿಗೆ ನೋಟಿಸ್ ನೀಡಲಾಗಿದೆ.
ಇನ್ನು ಮುಂದೆ ಕೋವಿಡ್ ಶವಗಳನ್ನು ಬೆಳಿಗ್ಗೆ 9 ರಿಂದ 6 ವರೆಗೆ ಮಾತ್ರ ಹಸ್ತಾಂತರ ಮಾಡಲಾಗುತ್ತದೆ. ಸ್ಥಳೀಯ ಮೆಡಿಕಲ್ ಆಫೀಸರ್ ಶವ ಪಡೆಯಲು ಜಿಲ್ಲಾಸ್ಪತ್ರೆಗೆ ಬರಬೇಕು. ಕುಟುಂಬ ಸದಸ್ಯರು ಬಂದು ಶವ ನೋಡಿ ದೃಢೀಕರಣ ಮಾಡಿ ಹೋಗಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಶವ ಹಸ್ತಾಂತರಕ್ಕೆ ವೈದ್ಯಕೀಯ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.