ಉಡುಪಿ: ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಯವರಿಗೂ ಹಾಗೂ ನೂತನ ತಾಲೂಕಿನ ಕಡಬದ ರಾಮಕುಂಜ ಎಂಬ ಪುಟ್ಟ ಗ್ರಾಮಕ್ಕೂ ಒಂದು ನಂಟು ಇದೆ ಎನ್ನಲಾಗಿದೆ.
ಇದೇ ಗ್ರಾಮದಲ್ಲಿಪೇಜಾವರ ಮಠದ ಶ್ರೀಗಳ ಪೂರ್ವಾಶ್ರಮವಿದೆ. ಬಾಲ್ಯದಲ್ಲಿ ಸ್ವಾಮೀಜಿಗಳ ಜೀವ ರಕ್ಷಿಸಿದ್ದು ಇದೇ ಗ್ರಾಮದ ಓಡಿ ಎಂಬ ದಲಿತ ಬಾಲಕ ಎಂದು ಸ್ವಾಮೀಜಿಗಳು ಒಮ್ಮೆ ಹೇಳಿಕೊಂಡಿದ್ದರು. ಸ್ವಾಮೀಜಿಗಳ ಪೂರ್ವಾಶ್ರಮದ ಹೆಸರು ವೆಂಕಟರಮಣ. 1931, ಏ. 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಈಗಿನ ಕಡಬ ತಾಲೂಕಿನ ಪುಟ್ಟಗ್ರಾಮ ರಾಮಕುಂಜದಲ್ಲಿ ಮಾಧ್ವ ಶಿವಳ್ಳಿ ಬ್ರಾಹ್ಮಣರಾದ ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ 2ನೇ ಮಗನಾಗಿ ಇವರು ಜನಿಸಿದ್ದರು.
1938ರಲ್ಲಿ 8ನೇ ವಯಸ್ಸಿನಲ್ಲಿಯೇ ಪೇಜಾವರ ಮಠದ ಆಗಿನ ಸ್ವಾಮೀಜಿಯವರಾಗಿದ್ದ ಶ್ರೀ ವಿಶ್ವಮಾನ್ಯ ತೀರ್ಥರು, ಅತ್ಯಂತ ಸಾತ್ವಿಕ ಸ್ವಭಾವದ ಬಾಲಕ ವೆಂಕಟರಮಣನಿಗೆ ಹಂಪಿಯ ಚಕ್ರತೀರ್ಥದಲ್ಲಿ ಸನ್ಯಾಸತ್ವ ನೀಡಿ, ಶ್ರೀವಿಶ್ವೇಶ ತೀರ್ಥ ಎಂದು ಮರುನಾಮಕರಣ ಮಾಡಿದರು. ತಾವು ಮಠಾಧಿಪತಿಗಳಾದ ಬಳಿಕ ಸ್ವಾಮೀಜಿ ಅಸ್ಪೃಶ್ಯತೆ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರು. ದಲಿತ ಕೇರಿಗೆ ಭೇಟಿ ಮಾಡಿ, ಸಹ ಭೋಜನ, ವಾಸ್ತವ್ಯ ಮುಂತಾದ ಪ್ರಗತಿಪರ ಸಾಹಸದ ಮೂಲಕ ಅವರನ್ನು ಮುಖ್ಯವಾಹಿನಿಗೆ ಸೇರಿಸಲು ಪ್ರಯತ್ನಿಸಿದ್ದರು.