ಉಡುಪಿ :ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ವೈಭವದ ತೆರೆ ಬಿದ್ದಿದೆ. ನಿನ್ನೆಯ ದಿನ ಉಪವಾಸ ಮಾಡಿ ಶ್ರೀಕೃಷ್ಣನ ಆರಾಧನೆ ಮಾಡಿದ ಭಕ್ತರು, ಇಂದು ಮುದ್ದುಕೃಷ್ಣನ ಲೀಲೋತ್ಸವ ವಿಟ್ಲಪಿಂಡಿಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ವಿಟ್ಲಪಿಂಡಿಯ ಸಂಭ್ರಮದಿಂದಾಗಿ ಕಡೆಗೋಲು ಶ್ರೀಕೃಷ್ಣನ ನಗರಿ ಉಡುಪಿ ಅಕ್ಷರಶಃ ಮಥುರೆಯಂತಾಗಿತ್ತು. ಅಷ್ಟಮಠಗಳ ಅಂಗಳದಲ್ಲಿ ದ್ವಾರಕೆಯ ಸಂಭ್ರಮ ಮನೆಮಾಡಿತ್ತು.
ಉಡುಪಿಯಲ್ಲಿ ಹಲವು ವರ್ಷಗಳಿಂದ ಶ್ರೀ ಕೃಷ್ಣನ ಜನ್ಮಲೀಲೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದನ್ನು ವಿಟ್ಲಪಿಂಡಿ ಎಂದು ಕರೆಯುತ್ತಾರೆ. ದ್ವಾಪರ ಯುಗದಲ್ಲಿ ಕೃಷ್ಣ ಹುಟ್ಟಿದ ಮರುದಿನ ಭಕ್ತರ ಸಂಭ್ರಮ ಹೇಗಿತ್ತು ಎಂಬುದಕ್ಕೆ ಉಡುಪಿಯ ಕೃಷ್ಣಲೀಲೋತ್ಸವ ಸಾಕ್ಷಿಯಾಗಿದೆ. ಇಂದು ಒಂದು ದಿನದ ಪುಟಾಣಿ ಕೃಷ್ಣನಿಗೆ ವಜ್ರಕವಚದ ಅಲಂಕಾರವನ್ನು ಮಾಡಲಾಗಿತ್ತು. ಇಡೀ ಮಠ ಹೂವಿನಿಂದ ಸಿಂಗಾರಗೊಂಡಿತ್ತು. ಬೆಳಗ್ಗೆಯಿಂದಲೇ ಭಕ್ತರು ಉಡುಪಿ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು.
ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಉಡುಪಿ ಕೃಷ್ಣ ಮಠದಿಂದ ಸಾಂಪ್ರದಾಯಿಕ ಗೊಲ್ಲ ವೇಷಧಾರಿಗಳು ರಥ ಬೀದಿಯನ್ನು ಪ್ರವೇಶ ಮಾಡಿದರು. ಮಠದ ಮುಖ ಮಂಟಪದ ಮುಂದೆ ಇರುವ ಮಡಿಕೆಯನ್ನು ಹೊಡೆದು ಬೆಣ್ಣೆ, ಮೊಸರನ್ನು ಹರಿಸುವ ಮೂಲಕ ಶ್ರೀ ಕೃಷ್ಣನಿಗೆ ಸ್ವಾಗತ ಕೋರಲಾಯಿತು. ಪಲ್ಲಕ್ಕಿಯಲ್ಲಿ ಮುದ್ದುಕೃಷ್ಣನ ಮೃಣ್ಮಯ ಮೂರ್ತಿಯನ್ನು ( ಮಣ್ಣಿನಿಂದ ತಯಾರಿಸಿದ)ಮೆರವಣಿಗೆ ಮಾಡಲಾಯಿತು. ಈ ವೇಳೆ ಸ್ವಾಮೀಜಿಗಳು ಚಿನ್ನದ ರಥಕ್ಕೆ ದೇವರನ್ನು ಆರೋಹಣ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಸಾವಿರಾರು ಜನ ಭಕ್ತರು, ನೂರಾರು ಕಲಾವಿದರು, ಹುಲಿ ವೇಷಧಾರಿಗಳ ನರ್ತನದೊಂದಿಗೆ ಶ್ರೀಕೃಷ್ಣನ ವೈಭವದ ಮೆರವಣಿಗೆ ಸಾಗಿತು.