ಉಡುಪಿ :ಆತ ಗ್ರಾಮ ಪಂಚಾಯತ್ ಒಂದರ ಅಧ್ಯಕ್ಷ.. ಗ್ರಾಮದ ರಕ್ಷಣೆಯ ಜವಾಬ್ದಾರಿ ಹೊರಬೇಕಾದ ಆತ ಸದ್ಯ ಕೊಲೆ ಆರೋಪ ಎದುರಿಸುತ್ತಿದ್ದಾನೆ. ಅಪಘಾತದ ನೆಪದಲ್ಲಿ ಕೊಲೆ ಮಾಡಿದ್ದಾನೆ ಎನ್ನುವುದು ಗ್ರಾಮಸ್ಥರ ಗಂಭೀರ ಆರೋಪ. ಕೊರೊನಾ ಕಾರಣದಿಂದ ಸಂಪೂರ್ಣ ಲಾಕ್ಡೌನ್ ಆಗಿದ್ದ ಗ್ರಾಮದಲ್ಲಿ ಶನಿವಾರ ರಾತ್ರಿ ರಕ್ತದ ಕೋಡಿ ಹರಿದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮದಲ್ಲಿ ಕೊರೊನಾ ಹೆಚ್ಚಾಗಿದೆ ಅಂತ ಸಂಪೂರ್ಣ ಲಾಕ್ಡೌನ್ ಮಾಡಲಾಗಿತ್ತು. ಹೀಗಾಗಿ, ಯಾರು ಕೂಡ ಗ್ರಾಮದಲ್ಲಿ ಓಡಾಡ್ತಿರಲಿಲ್ಲ.. ನಿನ್ನೆ ರಾತ್ರಿ ಹನಿ ಹನಿ ಮಳೆಯಾಗ್ತಾ ಶಾಂತವಾಗಿದ್ದ, ಆ ಊರಿನಲ್ಲಿ 8 ಗಂಟೆ ಸುಮಾರಿಗೆ "ಉದಯ್ ಗಾಣಿಗ ಕೊಲೆಯಾದ್‌ನಂತೆ ಹೌದೇ" ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಕೊಲೆ ಮಾಡಿದ್ ಮತ್ಯಾರೂ ಅಲ್ಲ ಅವ್ನೆ ಪಂಚಾಯತ್ ಅಧ್ಯಕ್ಷ ಇದ್ದ ಅಲ್ದೆ, ಪ್ರಾಣೇಶ್ ಯಡಿಯಾಳ್ ಎನ್ನುವ ಆರೋಪ ಕೊಲೆ ಸುದ್ದಿ ಜೊತೆಗೆನೇ ಕೇಳಿ ಬಂತು.
ಅಷ್ಟಕ್ಕೂ ಘಟನೆ ಏನೂ ಅಂತ ನೋಡುದಾದ್ರೆ, ಮೃತಪಟ್ಟ ಉದಯ್ ಗಾಣಿಗ ಹಾಗೂ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ನಡುವೆ ಈ ಹಿಂದಿನಿಂದಲೂ ಮನಸ್ತಾಪ ಇತ್ತು. ಕೊಳವೆಬಾವಿ ಪರವಾನಿಗೆ ಪಡೆಯುವ ವಿಚಾರದಲ್ಲಿ ವೈಯಕ್ತಿಕ ದ್ವೇಷ ಕೂಡ ಜೋರಾಗಿತ್ತು.. ಇದರ ನಡುವೆ ಮೊನ್ನೆ ಯಡಮೊಗೆ ಗ್ರಾಮ ಸಂಪೂರ್ಣ ಲಾಕ್ಡೌನ್ ಆದಾಗ ಗ್ರಾಮದ ಗಡಿಯನ್ನು ಬ್ಯಾರಿಕೇಡ್‌ನಿಂದ ಬಂದ್ ಮಾಡಿ, ತನ್ನ ಎಡ ಬಲಗಳಲ್ಲಿ ತನ್ನ ಬಂಟರನ್ನು ನಿಲ್ಲಿಸಿ, ಮಧ್ಯದಲ್ಲಿ ತಾನು ಕೂತು ಪ್ರಾಣೇಶ್ ಯಡಿಯಾಳ್ ಫೋಟೋಗೆ ಪೋಸ್ ಕೊಟ್ಟಿದ್ದ.
ಗ್ರಾಪಂ ಅಧ್ಯಕ್ಷನ ವಿರುದ್ಧ ಕೊಲೆ ಆರೋಪ ಇದನ್ನು ನೋಡಿದ, ಉದಯ್ ಗಾಣಿಗ ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ ಪೋಸು ಕೊಡಬೇಡಿ, ಕೊರೊನಾ ಪೀಡಿತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ. ಆಮೇಲೆ ಪ್ರಚಾರ ತಗೊಳ್ಳಿ, ಸರ್ಕಾರದ ಸಹಾಯ ಧನ ನುಂಗಬೇಡಿ ಎಂದು ಸ್ಟೇಟಸ್ ಹಾಕಿದ್ದ ಕೂಡ. ಇದನ್ನು ಸಹಿಸಿಕೊಳ್ಳಲು ಆಗದ ಪ್ರಾಣೀಶ್ ಯಡಿಯಾಳ್, ನಿನ್ನೆ ರಾತ್ರಿ ಉದಯ್ ತನ್ನ ಮನೆಯ ಎದುರಿನ ರಸ್ತೆಯಲ್ಲಿ ನಿಂತಿರುವಾಗ ಅಪಘಾತದ ನೆಪದಲ್ಲಿ ವ್ಯವಸ್ಥಿತ ಕೊಲೆ ಮಾಡಿದ್ದಾನೆ ಅಂತ ಗ್ರಾಮಸ್ಥರಿಂದ ಆರೋಪ ಕೇಳಿ ಬಂದಿದೆ.
ಅಧ್ಯಕ್ಷ ಪ್ರಾಣೇಶ್ ತನ್ನ ಕಾರ್‌ನಲ್ಲಿ ಉದಯ್‌ಗೆ ಡಿಕ್ಕಿ ಹೊಡೆದು ಕಾರನ್ನು ಅಲ್ಲೇ ಬಿಟ್ಟು ತಪ್ಪಿಸಿಕೊಂಡಿದ್ದ. ಇತ್ತ ಅರೆ ಜೀವದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಉದಯ್‌ನನ್ನು ಆಸ್ಪತ್ರೆಗೆ ಸೇರಿಸುವ ವೇಳೆಗೆ, ಅದಾಗಲೇ ಮಾರ್ಗ ಮಧ್ಯೆದಲ್ಲಿ ಜೀವ ಹೋಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಂಕರನಾರಾಯಣ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಪ್ರಾಣೇಶ್ ಯಡಿಯಾಳನನ್ನ ಪೊಲೀಸ್ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.