ಉಡುಪಿ : ನಗರದ ಇಂದ್ರಾಳಿ ಸೇತುವೆಯಿಂದ ರೈಲ್ವೆ ನಿಲ್ದಾಣದವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನ ಸಾಮಾನ್ಯರು ಪರದಾಡುವಂತಾಗಿದೆ. ಕಳೆದ ಎರಡು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದು, ಈ ಬಗ್ಗೆ ನಗರಸಭೆ ಮತ್ತು ಶಾಸಕರಿಗೆ ಹಲವು ಬಾರಿ ಮನವಿ ನೀಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸಮಾಜ ಸೇವಕ ನಿತ್ಯಾನಂದ ಒಳಕಾಡು ಹೇಳಿದ್ದಾರೆ.
ಈ ಬಗ್ಗೆ ನಿತ್ಯಾನಂದ ಒಳಕಾಡು ಅವರು ರಸ್ತೆ ದುರವಸ್ಥೆ ಬಗ್ಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿನಿತ್ಯ ಜನಸಾಮಾನ್ಯರು ಅನುಭವಿಸುವ ಸಮಸ್ಯೆಯನ್ನು ಅಣಕು ಪ್ರದರ್ಶನದ ಮೂಲಕ ಸರ್ಕಾರದ ಗಮನಕ್ಕೆ ತರಲು ಮುಂದಾಗಿದ್ದಾರೆ. ಆಂಬ್ಯುಲೆನ್ಸ್ನಲ್ಲಿ ಗರ್ಭಿಣಿ ಸ್ತ್ರೀಯೊಬ್ಬರು ಹದಗೆಟ್ಟಿರುವ ರಸ್ತೆಯಲ್ಲಿ ಸಂಚರಿಸಿ ಹೆರಿಗೆಯಾಗುವ ಅಣುಕು ಪ್ರದರ್ಶನವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮಾಡಿದೆ. ಈ ಅಣಕು ಪ್ರದರ್ಶನದಲ್ಲಿ ರಾಜು ಮತ್ತು ಹರೀಶ್ ಎಂಬವರು ಭಾಗಿಯಾಗಿದ್ದರು. ನಿತ್ಯಾನಂದ ಒಳಕಾಡು ಅವರ ಪ್ರತಿಭಟನೆಗೆ ರೈಲು ನಿಲ್ದಾಣದ ಆಟೋ ಚಾಲಕರು ಮತ್ತು ಟ್ಯಾಕ್ಸಿಮನ್ ಅಸೋಶಿಯೇಷನ್ ಬೆಂಬಲ ವ್ಯಕ್ತಪಡಿಸಿತ್ತು.