ಉಡುಪಿ: ಸರ್ಕಾರಿ ಹಾಸ್ಟೆಲ್ ಅಂದಾಕ್ಷಣ ಮೂಗು ಮುರಿಯೋರೇ ಹೆಚ್ಚು. ಅದೆಷ್ಟೋ ಹಾಸ್ಟೆಲ್ಗಳು ಅವ್ಯವಸ್ಥೆಯ ಆಗರವಾಗಿರುವ ಬಗ್ಗೆ ವರದಿಯಾಗ್ತಿರುತ್ತವೆ. ಆದ್ರೆ ಉಡುಪಿಯ ಈ ಹಾಸ್ಟೆಲ್ ಮಾತ್ರ ಯಾವುದೇ ಖಾಸಗಿ ವಸತಿ ನಿಲಯಕ್ಕೂ ಕಮ್ಮಿ ಇಲ್ಲ ಎನ್ನುವಂತಿದೆ.
ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಇರುವ ಡಾ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯರ ವಸತಿ ನಿಲಯ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಕೂಡಿದ್ದು, ಮಾದರಿ ಹಾಸ್ಟೆಲ್ ಎನಿಸಿಕೊಂಡಿದೆ.
ಇಲ್ಲಿ ಓದುವ ಕೋಣೆ, ಊಟದ ಕೋಣೆ, ಪ್ರಾರ್ಥನಾ ಸ್ಥಳ ಎಲ್ಲವೂ ಕೂಡಾ ಅಚ್ಚುಕಟ್ಟಾಗಿದೆ. ಹಾಸ್ಟೆಲ್ ಸುತ್ತಲೂ ಗಿಡಗಳನ್ನು ನೆಟ್ಟು, ವಿದ್ಯಾರ್ಥಿನಿಯರೇ ನಿರ್ವಹಣೆ ಮಾಡ್ತಾರೆ. ಜೊತೆಗೆ ತರಕಾರಿಯನ್ನೂ ಬೆಳೆಯುತ್ತಾರೆ. ಅದಕ್ಕೆ ಬೇಕಾದ ಗೊಬ್ಬರದ ಕೆಲಸವನ್ನೂ ಅವರೇ ಮಾಡ್ತಾರೆ.