ಉಡುಪಿ: ನಗರದ ಪ್ಯಾರಾಮೆಡಿಕಲ್ ಕಾಲೇಜಿನ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ (FIR) ದಾಖಲಿಸಿಕೊಂಡಿದ್ದಾರೆ. ಘಟನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆರೋಪಿತ ವಿದ್ಯಾರ್ಥಿನಿಯರನ್ನು ಬಂಧಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.
ಆರೋಪಿತ ವಿದ್ಯಾರ್ಥಿನಿಯರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳಾದ 509, 204 ,175 ,34, 66(ಇ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿಯರ ಜೊತೆಗೆ ಕಾಲೇಜು ಆಡಳಿತ ಮಂಡಳಿಯನ್ನೂ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.
"ಮಾರ್ಫಿಂಗ್ ಮಾಡಿದ ವಿಡಿಯೊವೊಂದನ್ನು ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ. ಮಹಿಳೆಯೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲೂ ಇದನ್ನು ಪೋಸ್ಟ್ ಮಾಡಿದ್ದಾರೆ. ಕೋಮು ದ್ವೇಷ ಹಾಗೂ ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಆರೋಪದ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿಗೆ ಆಗಮಿಸಿದ ಖುಷ್ಬೂ ಸುಂದರ್: ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಖುಷ್ಬೂ ಸುಂದರ್ ಬುಧವಾರ ಉಡುಪಿಗೆ ಆಗಮಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರಿಸಲು ಇಲ್ಲಿಗೆ ಬಂದಿದ್ದೇನೆ. ಮೊದಲು ಪೊಲೀಸರನ್ನು ಭೇಟಿ ಮಾಡಿ ವಿವರಗಳನ್ನು ಪಡೆಯುತ್ತೇನೆ. ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿನಿಯರನ್ನೂ ಮಾತನಾಡಿಸುತ್ತೇನೆ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ" ಎಂದರು.