ಕರ್ನಾಟಕ

karnataka

ETV Bharat / state

ಉಡುಪಿ: ಗೌಜು ಗದ್ದಲವಿಲ್ಲದೆ ನಡೆದ ವಿಟ್ಲಪಿಂಡಿ ಮಹೋತ್ಸವ - Vitlapindi Mahotsavam

ದೇವಾಲಯಗಳ ನಗರಿ ಉಡುಪಿಗೆ ಹೊಸ ಚೈತನ್ಯ ನೀಡುವ ಹಬ್ಬ ಅಷ್ಟಮಿ. ಲಕ್ಷಾಂತರ ಜನರು ಭಾಗವಹಿಸುವ ಉತ್ಸವ ವಿಟ್ಲಪಿಂಡಿ. ಆದ್ರೆ ಕೊರೊನಾ ಪ್ರಭಾವದಿಂದ ಈ ಬಾರಿ ಕೃಷ್ಣಮಠದಲ್ಲಿ ನೀರಸ ಅಷ್ಟಮಿ ನಡೆಯಿತು. ಆಚರಣೆಗಳು ಕೇವಲ ಸಂಪ್ರದಾಯಕ್ಕೆ ಸೀಮಿತವಾಗಿತ್ತು. ಕೊರೊನಾ ಕರಿನೆರಳಿನಲ್ಲಿ ವರುಣನ ಅರ್ಭಟದ ನಡುವೆಯೂ ನಡೆದ ಶ್ರೀ ಕೃಷ್ಣ ಲೀಲೋತ್ಸವ ಗೌಜು ಗದ್ದಲವಿಲ್ಲದೆ ಸಪ್ಪೆಯಾಗಿತ್ತು.

ವಿಟ್ಲಪಿಂಡಿ ಉತ್ಸವ
ವಿಟ್ಲಪಿಂಡಿ ಉತ್ಸವ

By

Published : Sep 11, 2020, 8:53 PM IST

Updated : Sep 11, 2020, 10:40 PM IST

ಉಡುಪಿ: ಕಲಿಯುಗದ ಕೊರೊನಾ ದ್ವಾಪರದ ಕಂಸನಂತೆ ಉಡುಪಿಯ ಕೃಷ್ಣನನ್ನು ಈ ಬಾರಿ ಬಾಧಿಸಿದ್ದು ಸುಳ್ಳಲ್ಲ. ಕೋವಿಡ್ -19 ಮಹಾಮಾರಿ ಉಡುಪಿಯನ್ನು ಮಾತ್ರವಲ್ಲ ಪ್ರಪಂಚವನ್ನೇ ಕಾಡುತ್ತಿದೆ. ಕೃಷ್ಣಮಠದಲ್ಲಿ ಸಂಪ್ರದಾಯಗಳಿಗೆ ಸೀಮಿತವಾಗಿ ವಿಟ್ಲಪಿಂಡಿ ಉತ್ಸವ ನಡೆಯಿತು.

ಭಕ್ತರಿಗೆ ರಥಬೀದಿಗೆ ಬರಲು ಅವಕಾಶವಿರಲಿಲ್ಲ. ಮಠದ ವೈದಿಕರು, ಗೊಲ್ಲರು, ಸಿಬ್ಬಂದಿ ಮಾತ್ರ ಹಾಜರಿದ್ದು, ಸರಳತೆಯ್ಲೂ ವೈಭವ ತೋರಿಸುವ ಹರಸಾಹಸ ಮಾಡಿದರು. ಪರ್ಯಾಯ ಅದಮಾರು ಮಠಾಧೀಶರು ಕಡಗೋಲು ಕೃಷ್ಣನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಪ್ರದಕ್ಷಿಣೆ ತರುವಾಗ ಮಠದ ಗೊಲ್ಲರು ಮೊಸರು ಕುಡಿಕೆಗಳನ್ನು ಒಡೆಯುತ್ತಾ ಸಾಗಿದರು.

ಗೌಜು ಗದ್ದಲವಿಲ್ಲದೆ ನಡೆದ ವಿಟ್ಲಪಿಂಡಿ ಮಹೋತ್ಸವ

ಲಕ್ಷಾಂತರ ಉಂಡೆ ಚಕ್ಕುಲಿ ಮಾಡಿದ್ದರೂ ಪ್ರಸಾದ ಸ್ವೀಕರಿಸಲು ಭಕ್ತರು ಬರಲು ಅವಕಾಶವಿರಲಿಲ್ಲ. ರಥಬೀದಿಯ ನಾಲ್ಕೂ ದ್ವಾರಗಳನ್ನು ಪೊಲೀಸ್ ಭದ್ರತೆಯಲ್ಲಿ ಬಂದ್ ಮಾಡಲಾಗಿತ್ತು. ಜನ ಸೇರಬಾರದು ಅನ್ನೋ ಕಾರಣಕ್ಕೆ ಮಧ್ಯಾಹ್ನದ ನಂತರ ಕನಕಕಿಂಡಿಯ ಮೂಲಕ ದೇವರ ದರ್ಶನಕ್ಕೂ ಬ್ರೇಕ್ ಹಾಕಲಾಗಿತ್ತು. ಜಿಟಿಜಿಟಿ ಮಳೆಯ ನಡುವೆಯೇ ಸಾಂಪ್ರದಾಯಿಕ ಉತ್ಸವ ಸಂಪನ್ನಗೊಂಡಿತು. ಜನರ ಬದಲಿಗೆ ಮಠದ ದನಗಳನ್ನು ರಥಬೀದಿಯಲ್ಲಿ ಕಟ್ಟಿ, ಕೃಷ್ಣ ದೇವರ ಆಗಮನವನ್ನು ಸಂಭ್ರಮಿಸಿದ್ದು, ವಿಟ್ಲಪಿಂಡಿಯ ವಿಶೇಷ.

ಶ್ರೀ ಕೃಷ್ಣ ಲೀಲೋತ್ಸವದ ದಿನ ಸಾವಿರಾರು ವೇಷಧಾರಿಗಳು ರಥಬೀದಿಗೆ ಬರೋದು ಸಂಪ್ರದಾಯ. ಆದರೆ ಈ ಬಾರಿ ಸಾಂಕೇತಿಕವಾಗಿ ಕೊರೊನಾ ಜಾಗೃತಿಯ ಒಂದೆರಡು ವೇಷಗಳು ಮಾತ್ರ ಬಂದಿದ್ದವು. ಈ ರೀತಿಯ ಅಷ್ಟಮಿ ಆಚರಣೆಯನ್ನು ಈ ತಲೆಮಾರಿನ ಜನರು ನೋಡಿದ್ದಿಲ್ಲ. ಆದರೂ ಸಂಪ್ರದಾಯಗಳಿಗೆ ಚ್ಯುತಿಯಾಗದಂತೆ ಮಠ ಹಾಗೂ ಜಿಲ್ಲಾಡಳಿತ ಎಚ್ಚರಿಕೆ ವಹಿಸಿ ಅಷ್ಟಮಿಯ ಆಚರಣೆ ನಡೆಸಿದ್ದು, ಗಮನಾರ್ಹ.

Last Updated : Sep 11, 2020, 10:40 PM IST

ABOUT THE AUTHOR

...view details