ಉಡುಪಿ: ಕಳೆದ ಆರು ತಿಂಗಳಿನಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಕೃಷ್ಣಮಠಕ್ಕೆ ಇಂದಿನಿಂದ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ಮೊದಲ ದಿನವೇ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂದು ದೇವರ ದರ್ಶನ ಮಾಡಿದರು.
ಕೃಷ್ಣಮಠ ಓಪನ್ : ಮೊದಲ ದಿನವೇ ಹರಿದು ಬಂತು ಭಕ್ತರ ದಂಡು - krishna matt open for devotees
ಕೊರೊನಾ ಬಿಕ್ಕಟ್ಟಿನಿಂದ ಬಾಗಿಲು ಮುಚ್ಚಿದ್ದ ಉಡುಪಿ ಕೃಷ್ಣನ ಸನ್ನಿಧಿ ಬಾಗಿಲು ತೆರೆದಿದ್ದು, ಶ್ರೀಕೃಷ್ಣನ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂತು. ಸದ್ಯ ಮಧ್ಯಾಹ್ನ ಎರಡು ಗಂಟೆಯಿಂದ ಐದರ ತನಕ ಮಾತ್ರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಮಠದ ಆಡಳಿತ ಮಂಡಳಿ ಸಾಕಷ್ಟು ಮುಂಜಾಗರೂಕತೆಗಳನ್ನೂ ತೆಗೆದುಕೊಂಡಿದ್ದು,ಭಕ್ತರ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಒಳಪ್ರವೇಶಿಸುವ ಭಕ್ತರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಸರತಿ ಸಾಲು ನಿಲ್ಲುವಾಗಲೂ ಸಾಮಾಜಿಕ ಅಂತರ ಕಾಪಾಡುವಂತೆ ಮಠದ ಸಿಬ್ಬಂದಿ ಭಕ್ತರಲ್ಲಿ ಮನವಿ ಮಾಡುತ್ತಿದ್ದಾರೆ.
ಅಂದಹಾಗೆ ಇಂದು ಯಾವುದೇ ಸೇವೆಗಳಿಗೂ ಅವಕಾಶ ಇರಲಿಲ್ಲ.ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇತ್ತು. ರಾಜಾಂಗಣ ಹಿಂಭಾಗದಿಂದ ಮಠಕ್ಕೆ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದ್ದು ,ಭಕ್ತರು ಕೋವಿಡ್ ಸಂದರ್ಭದಲ್ಲಿ ಪಾಲಿಸಬೇಕಾದ ಅಗತ್ಯ ಮುಂಜಾಗರೂಕತಾ ಕ್ರಮಗಳ ಬಗ್ಗೆಯೂ ಕೃಷ್ಣಮಠದ ಆಸುಪಾಸಿನಲ್ಲಿ ಬ್ಯಾನರ್ ,ಭಿತ್ತಿಪತ್ರಗಳ ಮೂಲಕ ಮಾಹಿತಿ ನೀಡಲಾಗಿದೆ.