ಉಡುಪಿ: ಗಲಾಟೆ ಸಂಬಂಧಿತ ವಿಚಾರದಲ್ಲಿ ಕೋರ್ಟ್ನಿಂದ ಜಾಮೀನು ಪಡೆದಿದ್ದರೂ ಯುವಕನೋರ್ವನನ್ನು ಮತ್ತೊಮ್ಮೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಂಡ್ಲೂರು ಗ್ರಾಮಾಂತರ ಠಾಣೆಯೆದುರು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ ಘಟನೆ ಮಂಗಳವಾರ ನಡೆದಿದೆ.
ಕಳೆದ ಬುಧವಾರ ನಡೆದ ಗಲಾಟೆ ವಿಚಾರದಲ್ಲಿ ನಾಗರಾಜ್ ಎನ್ನುವ ಯುವಕನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆತ ತನ್ನ ವಕೀಲರ ಮೂಲಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದಿದ್ದ. ಆದರೆ ಏಕಾಏಕಿ ಮಂಗಳವಾರ ಮುಂಜಾನೆ ಮನೆಗೆ ಬಂದ ಪೊಲೀಸರು ಯುವಕಕನ್ನು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರ ತಿಳಿಯುತ್ತಲೇ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ನೂರಾರು ಮಂದಿ ಪಕ್ಷಾತೀತವಾಗಿ ಠಾಣೆಯೆದುರು ಜಮಾಯಿಸಿದರು.
ಠಾಣೆಯೆದುರು ಜಾಮಾಯಿಸಿದ ಸಾರ್ವಜನಿಕರು ಠಾಣೆ ಬಳಿ ಭೇಟಿ ನೀಡಿದ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಘಟನೆ ಬಗ್ಗೆ ಈಗಾಗಲೇ ಎಸ್ಪಿ ಅವರ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕೆಲಸ ಮಾಡುವುದು ಸರಿಯಲ್ಲ. ನಾನು ಕೂಡ ನಾಲ್ಕು ಬಾರಿ ಶಾಸಕನಾಗಿದ್ದು, ಪೊಲೀಸರಿಗೆ ಯಾವ ವಿಚಾರದಲ್ಲಿಯೂ ಒತ್ತಡ ಹಾಕಿಲ್ಲ. ಆದರೆ ಇದೀಗ ಪ್ರತಿ ಕೇಸ್ನಲ್ಲಿಯೂ ರಾಜಕೀಯ ಹಸ್ತಕ್ಷೇಪವಾಗುತ್ತಿರುವ ದೂರುಗಳು ಕೇಳಿ ಬರುತ್ತಿದ್ದು, ಇದನ್ನು ಸಹಿಸಲ್ಲ. ಮುಂದೆ ಈ ರೀತಿಯ ಘಟನೆಗಳು ಪುನರಾವರ್ತನೆಯಾದರೆ ಸಂಬಂಧಪಟ್ಟ ಠಾಣೆಯೆದುರು ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆರೋಪಿಯನ್ನು ವಿಚಾರಣೆಗಾಗಿ ಕರೆಸಲಾಗಿತ್ತು. ಆತ ಬಾರದ ಕಾರಣ ಮನೆಗೆ ತೆರಳಿ ಕರೆತರಬೇಕಾಯ್ತು ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ.