ಕರ್ನಾಟಕ

karnataka

ETV Bharat / state

ಮಣ್ಣಿನಿಂದ ಕಲಾತ್ಮಕ ವಸ್ತುಗಳ ತಯಾರಿ: ಆತ್ಮ ನಿರ್ಭರ್​ ಭಾರತದ ಕನಸಿಗೆ ಕೈಜೋಡಿಸಿದ ಕುಂಬಾರರು - athma nirbhara bharat plan

ಚೀನಾದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಹೆಚ್ಚಿನ ದಿನಬಳಕೆಯ ವಸ್ತುಗಳನ್ನು ತಯಾರಿಸುವ ಪುಟ್ಟ ಘಟಕವೊಂದು ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆ. ಇಲ್ಲಿನ ಕುಂಬಾರರು ಆತ್ಮ ನಿರ್ಭರ್​ ಭಾರತ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

domestic-material-making-by-udupi-potters
ಆತ್ಮ ನಿರ್ಭರ ಭಾರತದ ಕನಸಿಗೆ ಕೈ ಜೋಡಿಸಿದ ಉಡುಪಿ ಕುಂಬಾರರು

By

Published : Sep 25, 2020, 4:45 PM IST

ಉಡುಪಿ: ಕೇಂದ್ರ ಸರ್ಕಾರದ ಆತ್ಮ ನಿರ್ಭರ್​ ಭಾರತದ ಕನಸಿಗೆ ಕರಾವಳಿಯ ಕುಂಬಾರರು ಕೈಜೋಡಿಸಿದ್ದಾರೆ. ಚೀನಾದಿಂದ ಆಮದಾಗುವ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಹೆಚ್ಚಿನ ದಿನಬಳಕೆಯ ವಸ್ತುಗಳನ್ನು ತಯಾರಿಸುವ ಪುಟ್ಟ ಘಟಕವೊಂದು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆ.

ಇಂಪೋರ್ಟೆಡ್ ಪ್ರಾಡಕ್ಟ್ ಗಳನ್ನಷ್ಟೇ ಎಸಿ ರೂಮಿನಲ್ಲಿ ಕುಳಿತು ಮಾಡುತ್ತಾರೆ ಎಂಬ ಭ್ರಮೆ ನಿಮಗಿದ್ದರೆ ಅದನ್ನು ಹುಸಿಗೊಳಿಸಲು ಸಿದ್ಧರಾಗಿದ್ದಾರೆ ಇಲ್ಲಿರುವ ಕುಂಬಾರ ಬಂಧುಗಳು. ಹೌದು, ಇಲ್ಲಿ ಅತ್ಯಂತ ಸುಸಜ್ಜಿತವಾದ ಶೋರೂಮ್ ಒಂದರಲ್ಲಿ ಕುಂಬಾರರು ತಮ್ಮ ನೂರಕ್ಕೂ ಅಧಿಕ ಬಗೆಯ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದಾರೆ. ಅಳಿವಿನಂಚಿನಲ್ಲಿರುವ ತಮ್ಮ ವೃತ್ತಿಯನ್ನು ಪ್ರೋತ್ಸಾಹಿಸುವ ಜೊತೆಗೆ ಪ್ಲಾಸ್ಟಿಕ್ ವಸ್ತುಗಳಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲಾಗುವ ಹಾನಿಯನ್ನು ತಪ್ಪಿಸಲು ಕುಲಾಲರ ವಿವಿದೋದ್ದೇಶ ಸಹಕಾರಿ ಸಂಘ ಮುಂದಾಗಿದೆ.

ಆತ್ಮ ನಿರ್ಭರ್​ ಭಾರತದ ಕನಸಿಗೆ ಕೈ ಜೋಡಿಸಿದ ಕರಾವಳಿ ಕುಂಬಾರರು

ಈ ಕುಲಾಲ ಸಂಘ ಕೇವಲ ಸ್ವಾವಲಂಬನೆಯ ಕನಸನ್ನು ಮಾತ್ರ ಕಂಡಿರುವಂತದ್ದಲ್ಲ. ಬದಲಾಗಿ ಕಂಡಿರುವಂತದ್ದನ್ನು ನನಸು ಮಾಡುವ ಮಾರ್ಗದಲ್ಲಿ ಗಟ್ಟಿಯಾದ ಹೆಜ್ಜೆಯನ್ನಿಡುತ್ತ ಮುಂದುವರೆಯುತ್ತಿದೆ. ಕೆಲ ವರ್ಷಗಳ ಹಿಂದೆ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಮುಂದೆ ಸಣ್ಣ ಅಂಗಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಈ ಸಂಘ ಈಗ ತನ್ನದೇ ಆದಂತಹ ಸ್ವಂತ ಕಟ್ಟಡವನ್ನು ಹೊಂದಿದೆ.

ಪ್ರಯೋಗಾತ್ಮಕ ಚಟುವಟಿಕೆಗಳಿಗೆ ಜನರಿಂದ ಬೆಂಬಲ: ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕುಂಬಾರಿಕೆಯ ವೃತ್ತಿಯ ಜೊತೆಗೆ ನವನವೀನ ಪ್ರಯೋಗಗಳನ್ನು ಮೈಗೂಡಿಸಿಕೊಂಡಿರುವ ಇಲ್ಲಿಯ ಸದಸ್ಯರು, ಈಗ ಮಣ್ಣಿನ ಬಗೆ ಬಗೆಯ ಪುರಾತನ ವಿಗ್ರಹಗಳಿಂದ ಹಿಡಿದು 70 ಪೈಸೆ ಬೆಲೆಬಾಳುವ ಯೂಸ್ ಅಂಡ್ ಥ್ರೋ ಚಹಾ ಕಪ್ಪುಗಳನ್ನು ಕೂಡ ತಯಾರಿಸುತ್ತಿದ್ದಾರೆ. ಯುವಕರ ಪ್ರಯೋಗಾತ್ಮಕ ಚಟುವಟಿಕೆಗಳಿಗೆ ಜನರಿಂದ ಭಾರೀ ಬೆಂಬಲ ವ್ಯಕ್ತವಾಗಿದ್ದು, ಸದ್ಯ ಈ ಮಡಿಕೆ ತಯಾರಿಕಾ ಕೇಂದ್ರ ಅಕ್ಕಪಕ್ಕದ ಊರಿನ ಜನರಿಗೆ ಒಂದು ಪಿಕ್ನಿಕ್ ಸ್ಪಾಟ್ ಆಗಿಯೂ ಬದಲಾಗಿದೆ.

ನಗರ ಭಾಗದಿಂದ ಹೆಚ್ಚು ಬೇಡಿಕೆ: ಭಾರತದ ಭಾರಿ ಮಾರುಕಟ್ಟೆಗೆ ತನ್ನ ಕಳಪೆ ಸರಕುಗಳನ್ನು ತಂದು ಸುರಿಯುತ್ತಿರುವ ಚೀನಾ ದೇಶಕ್ಕೆ ಸಡ್ಡು ಹೊಡೆಯಬೇಕಾದರೆ ಈ ರೀತಿಯ ಸಣ್ಣ ಪುಟ್ಟ ಗುಡಿ ಕೈಗಾರಿಕೆ ಚಟುವಟಿಕೆಗಳು ಗ್ರಾಮ ಗ್ರಾಮಗಳಲ್ಲಿ ನಡೆಯಬೇಕಿದೆ. ಯುವಕರು ತಯಾರಿಸುತ್ತಿರುವ ಮಣ್ಣಿನ ಕಲಾತ್ಮಕ ವಸ್ತುಗಳಿಗೆ ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಾಗಿ ನಗರ ಭಾಗದಿಂದಲೇ ಬೇಡಿಕೆ ಬರುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಇದೇ ರೀತಿಯ ಇನ್ನಷ್ಟು ಘಟಕಗಳನ್ನು ಉಡುಪಿಯಂತಹ ಬೃಹತ್ ನಗರಗಳಲ್ಲಿ ಆರಂಭಿಸುವ ಉದ್ದೇಶವನ್ನು ಈ ಯುವಕರು ಹೊಂದಿದ್ದಾರೆ.

ABOUT THE AUTHOR

...view details