ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದ ಸಮುದ್ರತೀರದಲ್ಲಿ ನಿಷೇಧಿತ ಪಚ್ಚಿಲೆ ಅಜೀರ್ ಮೀನು (ಪರ್ನವಿಡೀಸ್) ತೆಗೆಯುತ್ತಿದ್ದ ಅನ್ಯರಾಜ್ಯದ ಏಳು ಮೀನುಗಾರರನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಡೆ ಕಲ್ಲಿಗೆ ಅಂಟಿಕೊಂಡಿರುವ ಪಚ್ಚಿಲೆ ಅಜೀರ್ ಮೀನು ತೆಗೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಮೀನುಗಾರರು ಅವರನ್ನು ಹಿಡಿದು ಉಚ್ಚಿಲದ ಸುಭಾಷ್ ರಸ್ತೆ ಬಳಿಯ ಸಮುದ್ರ ಕಿನಾರೆಗೆ ತಂದಿದ್ದರು. ಬಳಿಕ ಪಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರ ವಶಕ್ಕೆ ನೀಡಿದ್ದಾರೆ. ಸದ್ಯ ಅವರು ಮೀನು ಹಿಡಿಯಲು ಬಳಸುತ್ತಿದ್ದ ದೋಣಿಯನ್ನು ಕೂಡ ದಂಡೆಗೆ ತಂದು ನಿಲ್ಲಿಸಲಾಗಿದೆ.
ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಬಂಡೆಗೆ ಅಂಟಿಕೊಂಡಿರುವ ಈ ಜಾತಿಯ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಬಂಡೆಗೆ ಅಂಟಿಕೊಂಡಿರುವ ಪಚ್ಚಿಲೆ ಮೀನನ್ನು ತಿನ್ನಲು ನಾನಾ ಜಾತಿಯ ಮೀನುಗಳು ಸಮುದ್ರ ತೀರಕ್ಕೆ ಬರುತ್ತವೆ. ತೀರ ಪ್ರದೇಶಕ್ಕೆ ಬರುವ ಇಂತಹ ಮೀನುಗಳನ್ನು ಹಿಡಿದು ಮೀನುಗಾರರು ತಮ್ಮ ದೈನಂದಿನ ಮೀನುಗಾರಿಕೆ ನಡೆಸುತ್ತಾರೆ. ಒಂದು ವೇಳೆ ಪಚ್ಚಿಲೆ ಮೀನು ತೆರವುಗೊಳಿಸಿದರೆ ತೀರ ಪ್ರದೇಶಕ್ಕೆ ಬರುವ ಮೀನುಗಳ ಸಂಖ್ಯೆ ಇಳಿಮುಖವಾಗುತ್ತದೆ. ಹಾಗಾಗಿ ಸ್ಥಳೀಯ ಮೀನುಗಾರರು ಯಾರೂ ಪಚ್ಚಿಲೆ ಮೀನನ್ನು ತೆಗೆಯುವುದಿಲ್ಲ.