ಉಡುಪಿ: ಅಯೋಧ್ಯೆ ತೀರ್ಪು ಹಿಂದೂಗಳ ಪರ ಬರುವ ನಿರೀಕ್ಷೆಯಿದೆ. ಆದ್ರೆ ಯಾರೂ ಕೂಡ ವಿಜಯೋತ್ಸವ ಮಾಡಬಾರದು. ತೀರ್ಪು ಹಿಂದೂಗಳ ಪರ ಬಂದರೆ ಮುಸ್ಲಿಂ ಸಮುದಾಯದ ಜೊತೆ ಶಾಂತಿಯಿಂದ ಇರಬೇಕು ಎಂದು ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.
ವಿಶ್ವೇಶ ತೀರ್ಥ ಸ್ವಾಮೀಜಿ, ಉಡುಪಿ ಪೇಜಾವರ ಮಠ ವಿಶ್ವ ಹಿಂದೂ ಪರಿಷತ್ ಈ ಸಂಬಂಧ ನಿರ್ಣಯವೊಂದನ್ನು ತೆಗೆದುಕೊಂಡಿದೆ. ವಿಜಯೋತ್ಸವ ಮಾಡಿ ಯಾವುದೇ ಸಮುದಾಯದ ಶಾಂತಿಗೆ ಭಂಗ ಆಗದಂತೆ ನೋಡಿಕೊಳ್ಳಬೇಕೆಂಬುದೇ ನನ್ನ ಕಳಕಳಿಯಾಗಿದೆ. ಮುಖ್ಯವಾಗಿ ಕರಾವಳಿ ಕರ್ನಾಟಕದಲ್ಲಿ ಶಾಂತಿ ನೆಲೆಸಬೇಕು ಎಂಬುದು ನನ್ನ ಬಯಕೆ. ತೀರ್ಪು ಯಾರ ಪರ ಬಂದರೂ ಜನರು ಶಾಂತಿ ಕಾಪಾಡಬೇಕು. ಏಕೆಂದರೆ ಮೆರವಣಿಗೆ, ವಿಜಯೋತ್ಸವದಿಂದ ಘರ್ಷಣೆಗೆ ಅವಕಾಶವಾಗುತ್ತದೆ ಎಂದು ಅವರು ನುಡಿದರು.
ಒಂದು ವೇಳೆ ಶಾಂತಿಭಂಗವಾದಲ್ಲಿ ಉಪವಾಸ ಕುಳಿತುಕೊಳ್ಳುವ ಎಚ್ಚರಿಕೆಯನ್ನೂ ಶ್ರೀಗಳು ನೀಡಿದ್ದಾರೆ. ತೀರ್ಪು ಏನೇ ಬಂದರೂ ಶಾಂತಿಭಂಗ ಸಲ್ಲದು. ಒಂದು ವೇಳೆ ಹಿಂದೂಗಳ ಪರ ತೀರ್ಪು ಬಂದರೆ ಯಾವಾಗ ರಾಮ ಮಂದಿರ ನಿರ್ಮಾಣ ಮಾಡಲಾಗುವುದು ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತೇವೆ ಎಂದು ಹೇಳಿದರು.
ಇನ್ನು ಟಿಪ್ಪು ಸುಲ್ತಾನ್ ವಿವಾದಿತ ವ್ಯಕ್ತಿ. ಕೊಡಗಿನಲ್ಲಿ ಟಿಪ್ಪುವಿನಿಂದ ಹತ್ಯಾಕಾಂಡ ಆಗಿದೆ. ವಿವಾದಿತರ ಜಯಂತಿ ಸರಿಯಲ್ಲ. ಟಿಪ್ಪು ಒಳ್ಳೆಯ ಕೆಲಸ ಕೂಡಾ ಮಾಡಿದ್ದಾನೆ. ಟಿಪ್ಪು ಹಲವು ಕೆಟ್ಟ ಕೆಲಸವನ್ನೂ ಮಾಡಿದ್ದಾನೆ. ಟಿಪ್ಪು ಬಗ್ಗೆ ಪಠ್ಯದಲ್ಲಿ ಸತ್ಯದ ವಿಚಾರ ಬರೆಯಬೇಕು. ಆತನಿಗೆ ಎರಡು ಮುಖವಿದೆ. ಇತಿಹಾಸದಲ್ಲಿ ಸತ್ಯಾಂಶ ಬರೆಯಬೇಕು. ವಿವಾದಿತ ವ್ಯಕ್ತಿಯ ಕುರಿತ ವಿಚಾರ ಸತ್ಯ ನಿಷ್ಠುರವಾಗಿರಬೇಕು ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.