ಉಡುಪಿ:ಬ್ಲೂ ಪ್ಲ್ಯಾಗ್ ಮಾನ್ಯತೆ ದೊರಕಿದ ಜಿಲ್ಲೆಯ ಪಡುಬಿದ್ರಿ ಬೀಚ್ ಸೌಂದರ್ಯ ಮತ್ತು ಸೌಕರ್ಯ ಹೇಗಿದೆ ನೋಡೋಣ ಬನ್ನಿ.
ಪ್ರವಾಸಿಗರ ಮೆಚ್ಚಿನ ತಾಣ ಉಡುಪಿಗೆ ಸಾವಿರಾರು ಪ್ರವಾಸಿಗರು ಆಗಮಿಸಿ, ಎಂಜಾಯ್ ಮಾಡ್ತಾರೆ. ಉಡುಪಿಗೆ ಬಂದವರು ಇಲ್ಲಿನ ಬೀಚ್‌ಗಳಿಗೆ ಹೋಗದೆ ಇರೋಕೆ ಚಾನ್ಸೇ ಇಲ್ಲ. ಅಷ್ಟು ಸುಂದರವಾಗಿದೆ ಉಡುಪಿಯ ಬೀಚ್‌ಗಳು. ಪಡುಬಿದ್ರಿ ಬೀಚ್ ಪರಿಸರ ಸ್ನೇಹಿಯಾಗಿ ಅತ್ಯಾಧುನಿಕ ಸೌಲಭ್ಯ ಹೊಂದಿದೆ. ಜೊತೆಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ದೇಶದ ಎಂಟು ಬೀಚ್‌ಗಳಲ್ಲಿ ನಮ್ಮ ಕರಾವಳಿಯ ಪಡುಬಿದ್ರಿ ಬೀಚ್ ಕೂಡ ಒಂದು.
ಬ್ಲೂ ಪ್ಲ್ಯಾಗ್ ಮಾನ್ಯತೆ ಪಡೆದ ಪಡುಬಿದ್ರಿ ಬೀಚ್, ಪ್ರವಾಸಿಗರ ಹಾಟ್ಸ್ಪಾಟ್ ಅಂತಾರಾಷ್ಟ್ರೀಯ ಮಟ್ಟದ ಫೌಂಡೇಶನ್ ಫಾರ್ ಎನ್ವಿರಾನ್‌ಮೆಂಟಲ್ ಎಜುಕೇಶನ್ ಎಂಬ ಸಂಸ್ಥೆಯು ಪರಿಸರ ಸ್ನೇಹಿ ಬೀಚ್ ಗಳಿಗೆ ನೀಡುವ ಪ್ರತಿಷ್ಠಿತ ಬ್ಲ್ಯೂ ಫ್ಲ್ಯಾಗ್ ಮಾನ್ಯತೆಯು ದೇಶದ ಒಟ್ಟು ಎಂಟು ಬೀಚ್ ಗಳಿಗೆ ದೊರಕಿದೆ. ಇದರಲ್ಲಿ ನಮ್ಮ ಉಡುಪಿಯ ಪಡಿಬಿದ್ರೆ ಕೂಡ ಒಂದು. ಒಟ್ಟು 8 ಕೋಟಿ ವೆಚ್ಚದಲ್ಲಿ ಪಡುಬಿದ್ರಿ ಬೀಚ್ ಅನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದ್ದು, ಸ್ನಾನ ಗೃಹ, ಬಟ್ಟೆ ಬದಲಾಯಿಸುವ ಕೋಣೆ, ನೀರು ಶುದ್ದೀಕರಣ ಘಟಕ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮರಾ ಹಾಗೂ ನಿಯಂತ್ರಣ ಕೊಠಡಿ, ಮಕ್ಕಳ ಆಟಿಕೆ ಸಾಮಗ್ರಿಗಳು, ಪ್ರಥಮ ಚಿಕಿತ್ಸಾ ಕೊಠಡಿ ಸಹಿತ ಅತ್ಯಾಧುನಿಕ ಸೌಲಭ್ಯಗಳು ಬೀಚ್‌ನಲ್ಲಿ ಕಲ್ಪಿಸಲಾಗಿದೆ. ಅಲ್ಲದೆ ಇತರ ಬೀಚ್‌ಗಳಿಗೆ ಹೋಲಿಸಿದರೆ ಸ್ವಚ್ಛತೆಯಲ್ಲೂ ಒಂದು ಕೈ ಮುಂದಿದ್ದು, ಸುಮಾರು ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ವ್ಯವಸ್ಥಿತವಾಗಿ ಬೀಚ್ ನಿರ್ವಹಣೆ ಮಾಡುತ್ತಿದ್ದಾರೆ.
ಬ್ಲೂ ಫ್ಲ್ಯಾಗ್ ಬೀಚ್‌ಗಳು ಅತ್ಯಂತ ಸ್ವಚ್ಛ ಕಡಲ ಕಿನಾರೆಗಳಾಗಿದ್ದು, ಪರಿಸರ ಸ್ನೇಹಿಯಾಗಿ ಮುಂದೆ ಹೋಂ ಸ್ಟೇ, ಟೂರಿಸ್ಟ್ ಗೈಡ್, ಟ್ಯಾಕ್ಸಿ ಸೇವೆಗಳು ಮುಂತಾದವುಗಳ ಮೂಲಕ ವಿದೇಶಿ ಆದಾಯವನ್ನು ಆಕರ್ಷಿಸುವುದು ಇವುಗಳ ಮೊದಲ ಗುರಿ. ಇದೊಂದು ಅಂತಾರಾಷ್ಟ್ರೀಯ ಮಾನ್ಯತೆ ಆದ ಕಾರಣ ದೇಶ ವಿದೇಶಗಳ ಪ್ರವಾಸಿಗರು ಪಡುಬಿದ್ರಿಗೆ ಆಗಮಿಸುವ ಸಾಧ್ಯತೆ ಇದೆ ಇದರಿಂದ ಪ್ರವಾಸೋದ್ಯಮ ಚೇತರಿಸಿಕೊಂಡು ಸ್ಥಳೀಯರ ಆರ್ಥಿಕ ಅಭಿವೃದ್ಧಿಗೂ ನೆರವಾಗುವ ಸಾಧ್ಯತೆ ಇದೆ.