ಉಡುಪಿ: ಬ್ಯಾಂಕಿನಲ್ಲಿ ಫಿಕ್ಸ್ಡ್ ಡೆಪಾಸಿಟ್ ಇಟ್ಟಿದ್ದ ಹಣ ಕಳೆದುಕೊಂಡು ವ್ಯಕ್ತಿಯೊಬ್ಬರು ನ್ಯಾಯಕ್ಕಾಗಿ ಕಾನೂನು ಹೋರಾಟ ಮಾಡುತ್ತಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಫಿಕ್ಸ್ಡ್ ಡಿಪಾಸಿಟಿ ಇಟ್ಟಿದ್ದ ಹಣ ಕಳೆದುಕೊಂಡ ಹರೀಶ್ ಜಿಲ್ಲೆಯ ಉಪ್ಪೂರಿನ ನಿವಾಸಿ ಹರೀಶ್ ಗುಡಿಗಾರ್ ಹಣ ಕಳೆದುಕೊಂಡವರು. ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಗ ಮಲ್ಲೇಶ್ವರಂನ ಸ್ಟೇಟ್ ಬ್ಯಾಂಕಿನಲ್ಲಿ ಸೇವಿಂಗ್ಸ್ ಬ್ಯಾಂಕ್ ಖಾತೆ ಹೊಂದಿದ್ದರು. ಊರಿನಲ್ಲಿ ಸ್ವಂತದೊಂದು ಮನೆ ನಿರ್ಮಿಸಬೇಕೆಂದು ಅಕೌಂಟ್ನಲ್ಲಿ ಹಣ ಕೂಡಿಟ್ಟಿದ್ದರು. ಬೆಂಗಳೂರು ತೊರೆದ ಬಳಿಕ 2019ರಲ್ಲಿ ಉಡುಪಿಯ ಸಂತೆಕಟ್ಟೆಯ ಎಸ್ಬಿಐ ಬ್ರಾಂಚಿಗೆ ಅಕೌಂಟ್ ವರ್ಗಾವಣೆ ಮಾಡಿದ್ದರು. ತನ್ನ ದುಡಿಮೆಯ ಐದೂವರೆ ಲಕ್ಷ ರೂ.ಫಿಕ್ಸ್ಡ್ ಡಿಪಾಸಿಟ್ ಹಾಗೆ ಇತ್ತು.
ಊರಿನಲ್ಲೇ ಕರಕುಶಲ ವೃತ್ತಿ ಮಾಡಿಕೊಂಡಿದ್ದರು. ನಂತರ ದಿನಗಳಲ್ಲಿ ಅಂದ್ರೆ 2019 ಆಗಸ್ಟ್ 23 ರಂದು, ಮೊಬೈಲ್ಗೆ ಬಂದ ಮೆಸೇಜ್ ನೋಡಿದ್ರೆ, ಹರೀಶ್ ಅವರ ಫಿಕ್ಸ್ಡ್ ಡೆಪಾಸಿಟ್ನಲ್ಲಿದ್ದ ಹಣವೇ ಮಂಗ ಮಾಯವಾಗಿ, ಕೇವಲ ₹6360 ಮಾತ್ರ ಉಳಿದಿತ್ತು.
ಹಣ ಕಳೆದುಕೊಂಡ ಹರೀಶ್ ಪೊಲೀಸರಿಗೆ ದೂರು ಕೊಟ್ಟರು. ಬ್ಯಾಂಕ್ ಮ್ಯಾನೇಜರ್ಗೆ ದುಂಬಾಲು ಬಿದ್ದರು. ಎರಡು ವರ್ಷ ಹಣ ಕಳೆದುಕೊಂಡು ಓದ್ದಾಡಿದರು. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ನವರು ಗ್ರಾಹಕರ ನೆರವಿಗೆ ಬರಬೇಕು, ಆದರೆ ಬರಲಿಲ್ಲ. ಬ್ಯಾಂಕಿನವರು ಸಮರ್ಪಕ ಉತ್ತರ ಕೊಡದೇ ಇದ್ದ ಕಾರಣ, ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷರಾದ, ರವೀಂದ್ರನಾಥ್ ಶಾನ್ಬೋಗ್ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡರು, ಅವರ ಮೂಲಕವೇ ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು.
ಎಲ್ಲ ತನಿಖೆ ನಂತರ ಹರೀಶ್ ಕಳೆದುಕೊಂಡ ಹಣವನ್ನು ಬಡ್ಡಿ ಸಮೇತ ಅಂದ್ರೆ, ಐದೂವರೆ ಲಕ್ಷಕ್ಕೆ 10% ಬಡ್ಡಿ ನೀಡಬೇಕು, ಜೊತೆಗೆ 50 ಸಾವಿರ ಪರಿಹಾರ, ಕೋರ್ಟ್ ವೆಚ್ಚ ಅಂತಾ 10 ಸಾವಿರವನ್ನು ಮೂವತ್ತು ದಿನಗಳ ಒಳಗೆ ನೀಡಬೇಕು ಅಂತಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ. ಸದ್ಯ ತೀರ್ಪು ಬಂದು ನಲವತ್ತು ದಿನವಾದ್ರೂ ಹಣ ಮಾತ್ರ ಹರೀಶ್ ಕೈ ತಲುಪಿಲ್ಲ. ಹೀಗಾಗಿ, ಮಾನವ ಹಕ್ಕುಗಳ ಅಧ್ಯಕ್ಷರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.