ಉಡುಪಿ:ಪೊಡವಿಗೊಡೆಯನ ಪುಣ್ಯ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಇದ್ದ ಹಬ್ಬದ ವಾತಾವರಣಕ್ಕೆ ತೆರೆ ಬಿದ್ದಿದೆ. ಉಡುಪಿ ಕೃಷ್ಣ ಮಠದ ರಥ ಬೀದಿಯಲ್ಲಿ ನಡೆದ ವಿಟ್ಲ ಪಿಂಡಿ ಉತ್ಸವ ಕೃಷ್ಣನ ಲೀಲೆಗಳನ್ನು ನೆನಪಿಸಿತು. ಅದ್ದೂರಿಯಾಗಿ ನಡೆದ ಉತ್ಸವಕ್ಕೆ ವಿವಿಧ ವೇಷಧಾರಿ ತಂಡಗಳು ರಂಗು ನೀಡಿದವು. ಕೃಷ್ಣನ ಕಾಣಲು ಇಡೀ ರಥ ಬೀದಿಯೇ ನಂದಗೋಕುಲವಾಗಿ ಮಾರ್ಪಟ್ಟಿತ್ತು.
ಅಷ್ಟ ಮಠಗಳ ಊರಾದ ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ತೆರೆ ಬಿದ್ದಿದೆ. ಇಂದು ಮಠದ ರಥ ಬೀದಿಯಲ್ಲಿ ನಡೆದ ವಿಟ್ಲ ಪಿಂಡಿ ಲೀಲೋತ್ಸವವು ಇಡೀ ರಥ ಬೀದಿಯನ್ನು ನಂದಗೋಕುಲವನ್ನಾಗಿಸಿತು. ಬಾಲ ಗೋಪಾಲನ ಹುಟ್ಟನ್ನು ಸಂಭ್ರಮಿಸುವ ಲೀಲೋತ್ಸವಗಳು ರಥ ಬೀದಿಯಲ್ಲಿ ಕಂಡುಬಂದವು. ಮಧ್ಯಾಹ್ನದ ಬಳಿಕ ರಥ ಬೀದಿಯಲ್ಲಿ ನಡೆದ ಲೀಲೋತ್ಸವಕ್ಕೆ ಭಕ್ತ ಸಾಗರವೇ ಸಾಕ್ಷಿಯಾಯಿತು. ಗರ್ಭಗುಡಿಯಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ನಡೆಸಿದ ಬಳಿಕ ಚಿನ್ನದ ರಥದಲ್ಲಿ ಕಡೆಗೋಲು ಕೃಷ್ಣನ ಮಣ್ಣಿನ ಮೂರ್ತಿಯನ್ನಿಟ್ಟು ಅದಮಾರು ಕಿರಿಯ ಮಠಾಧೀಶರು ಪೂಜೆ ಮಾಡಿದರು. ಜೊತೆಗೆ ನವರತ್ನ ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವರ ಮೆರವಣಿಗೆ ನಡೆಯಿತು. ರಥೋತ್ಸವ ನಡೆಯುವಾಗ ಪರ್ಯಾಯ ಪಲಿಮಾರು ಮಠಾಧೀಶರ ಸಹಿತ ವಿವಿಧ ಮಠಾಧೀಶರು ಪಾಲ್ಗೊಂಡು ಸಂಭ್ರಮಕ್ಕೆ ಸಾಕ್ಷಿಯಾದರು.