ಉಡುಪಿ: ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆಯಿಂದ ಖಾಸಗಿ ಮತ್ತು ಸರ್ಕಾರಿ ಬಸ್ಗಳು ಓಡಾಟ ಆರಂಭಿಸಲಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜನತಾ ಕರ್ಫ್ಯೂ ಘೋಷಣೆಯಾದ ನಂತರ ಉಡುಪಿ ಜಿಲ್ಲೆಯಲ್ಲಿ ಯಾವುದೇ ಬಸ್ ಸಂಚಾರ ಇರಲಿಲ್ಲ. ಇದೀಗ ಮೇ 13 ಬೆಳಗ್ಗೆಯಿಂದ ಜಿಲ್ಲೆಯ ಒಳಗೆ ಖಾಸಗಿ ಮತ್ತು ಸರ್ಕಾರಿ ಬಸ್ಗಳು ಸೇವೆ ಆರಂಭಿಸಲಿವೆ. 50 ಪ್ರಯಾಣಿಕರು ಮಾತ್ರ ಒಂದೊಂದು ಬಸ್ನಲ್ಲಿ ಓಡಾಡಬಹುದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಮಾಸ್ಕ್ ಧರಿಸದ ಪ್ರಯಾಣಿಕರನ್ನು ಬಸ್ ಒಳಗೆ ಬಿಟ್ಟುಕೊಳ್ಳಬೇಡಿ ಎಂದು ನಿರ್ವಾಹಕರಿಗೆ, ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಕೆಎಸ್ಆರ್ಟಿಸಿಯ ಅಧಿಕಾರಿಗಳು ರೂಟ್ ಸರ್ವೆ ಮುಗಿಸಿದ್ದು, ಅಗತ್ಯ ಇರುವ ರಸ್ತೆಗಳಲ್ಲಿ ಬಸ್ಗಳನ್ನು ಓಡಿಸಲಿದ್ದಾರೆ. ಖಾಸಗಿ ಬಸ್ ಮಾಲೀಕರ ಸಂಘದಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಕೆಲವು ಖಾಸಗಿ ಬಸ್ಗಳು ನಾಳೆ ರಸ್ತೆಗಿಳಿಯಲಿವೆ. ಸರ್ಕಾರದ ನಿಯಮಗಳನ್ನು ಪಾಲಿಸಿ ಸ್ಯಾನಿಟೈಸರ್ ಕೊಟ್ಟು, ಮಾಸ್ಕ್ ಧರಿಸುವಂತೆ ನೋಡಿಕೊಂಡು ಬಸ್ ಓಡಿಸುವುದು ಕಷ್ಟ ಸಾಧ್ಯ ಎಂದು ಕೆಲ ಬಸ್ ಮಾಲೀಕರು ಬಸ್ ಓಡಿಸದಿರಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ಚೆಕ್ ಪೋಸ್ಟ್ ತಪ್ಪಿಸಿಕೊಂಡು ಬಂದರೆ ಹುಷಾರ್: ಚೆಕ್ ಪೋಸ್ಟ್ ತಪ್ಪಿಸಿ ಬಂದರೆ ಐಡೆಂಟಿಫೈ ಮಾಡಿ ಕ್ವಾರಂಟೈನ್ ಮಾಡುತ್ತೇವೆ. ಹಳ್ಳಿಗಳಲ್ಲಿ ಗ್ರಾಪಂ ಕಾರ್ಯಪಡೆಗೆ ಕ್ವಾರಂಟೈನ್ ಜವಾಬ್ದಾರಿ ನೀಡಲಾಗಿದೆ. ನಗರ ಪ್ರದೇಶದಲ್ಲಿ ಕಮಿಷನರ್ ಕ್ವಾರಂಟೈನ್ ಮಾಡುತ್ತಾರೆ. ಹೊರ ರಾಜ್ಯಗಳಿಂದ ಕಣ್ತಪ್ಪಿಸಿ ಬಂದಿದ್ದರೆ ಸಾರ್ವಜನಿಕರು ಮಾಹಿತಿ ನೀಡಬೇಕು. ಸಾರ್ವಜನಿಕರಿಂದ ಮಾಹಿತಿ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಕಣ್ತಪ್ಪಿಸಿ ಬಂದವರ ಆರೋಗ್ಯ ಪರೀಕ್ಷೆ ನಡೆಸಿ ಕ್ವಾರಂಟೈನ್ ಮಾಡಲಾಗುವುದು. ತಪ್ಪಿಸಿ ಬಂದವರ ಮಾಹಿತಿ ಇದ್ದರೆ ಸ್ಥಳೀಯಾಡಳಿತದ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಡಿಸಿ ಜಗದೀಶ್ ವಿನಂತಿ ಮಾಡಿದ್ದಾರೆ.
ಉಡುಪಿ- ಮಂಗಳೂರು ಓಡಾಟಕ್ಕೆ ಪಾಸ್ ಬೇಡ: ಉಡುಪಿ ಮತ್ತು ಮಂಗಳೂರು ಒಂದೇ ಯೂನಿಟ್ ಎಂದು ಪರಿಗಣಿಸಲಾಗುವುದು. ನಾಳೆಯಿಂದ ಓಡಾಟ ನಡೆಸಲು ಪಾಸ್ ಬೇಡ. ಬೆಂಗಳೂರು-ರಾಮನಗರ ಮಾದರಿಯಲ್ಲಿ ಉಡುಪಿ ಮತ್ತು ಮಂಗಳೂರನ್ನು ಸರ್ಕಾರ ಜೋಡಿಸೋ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಉಡುಪಿ-ಮಂಗಳೂರು ನಡುವೆ ಓಡಾಟಕ್ಕೆ ಡಿಸಿ ಪಾಸ್ ಅಗತ್ಯವಿಲ್ಲ. ಕಂಪನಿಯ ಗುರುತಿನ ಚೀಟಿ ಮತ್ತು ಅನುಮತಿ ಪತ್ರ ಇದ್ದರೆ ಸಾಕು. ಸರಕು ಸಾಗಾಟ ಉದ್ಯೋಗ ಮತ್ತು ವೈದ್ಯಕೀಯ ತುರ್ತು ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಈ ಹಿಂದೆ ಮಂಗಳೂರು ತೆರಳಬೇಕಿದ್ದರೆ ಜಿಲ್ಲಾಧಿಕಾರಿ ಪಾಸ್ ಅಗತ್ಯವಿತ್ತು. ಇನ್ನು ಮುಂದೆ ಪಾಸ್ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.