ಉಡುಪಿ:ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಉಡುಪಿಯಲ್ಲಿ ಭಾರೀ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಮುಸ್ಲಿಂ ಒಕ್ಕೂಟ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹತ್ತಾರು ಸಮಾನ ಮನಸ್ಕ ಸಂಘಟನೆಗಳು ಭಾಗವಹಿಸಿದ್ದವು. ಈ ವೇಳೆ ದಿಕ್ಸೂಚಿ ಭಾಷಣ ಮಾಡಿದ ಪ್ರಗತಿಪರ ಹೋರಾಟಗಾರ ಶಿವಸುಂದರ್, ಈ ದೇಶದ ಮುಸಲ್ಮಾನರು ವಲಸೆಗಾರರಲ್ಲ. ಈ ಮಸೂದೆ ಪ್ರಕಾರ ಹಿಂದೂಗಳು ಈ ದೇಶದ ಮೂಲ ನಿವಾಸಿಗಳೆಂದು ಸಾಬೀತು ಮಾಡಬೇಕು. ಹೀಗಾಗಿ ಎಲ್ಲರೂ ಇದನ್ನು ವಿರೋಧಿಸುವ ಅಗತ್ಯ ಇದೆ ಎಂದರು.
ಜಿಲ್ಲಾ ಮುಸ್ಲಿಂ ಒಕ್ಕೂಟ ನೇತೃತ್ವದಲ್ಲಿ CAB ವಿರುದ್ಧ ಪ್ರತಿಭಟನೆ ಮುಸಲ್ಮಾನರಿಗೆ ನೇರ ಚೂರಿ ಇರಿಯುವ ಈ ಮಸೂದೆ ಹಿಂದೂಗಳ ಬೆನ್ನಿಗೆ ಚೂರಿ ಇರಿಯುತ್ತದೆ. ಎನ್.ಆರ್.ಸಿಗೂ ಸಿಎಬಿಗೂ ಸಂಬಂಧ ಇಲ್ಲ ಎಂದು ಹೇಳುತ್ತಾರೆ. ಆದರೆ ನೇರ ಸಂಬಂಧ ಇದೆ. ಇದರ ವಿರುದ್ಧ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ವಿರೋಧ ಪಕ್ಷದ ಮತದಾರರ ಪೌರತ್ವವನ್ನೇ ಕಿತ್ತುಕೊಂಡು ಬಿಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಎನ್.ಆರ್.ಸಿ ಮತ್ತು ಸಿಎಬಿ ಜಾತಿ ತಾರತಮ್ಯದಿಂದ ಕೂಡಿದೆ. ಬೇರೆಲ್ಲ ಧರ್ಮಗಳಿಗೆ ವಿನಾಯಿತಿ ಇದೆ. ಮುಸಲ್ಮಾನರಿಗೆ ವಿನಾಯಿತಿ ಇಲ್ಲ. ಇಸ್ರೇಲ್ ಮಾದರಿಯಲ್ಲಿ ಒಡೆದು ಆಳುವ ನೀತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ದೂರಿದರು.