ಉಡುಪಿ: ಆಡಳಿತ ಯಂತ್ರವನ್ನು ಗ್ರಾಮಸ್ಥರ ಮನೆಬಾಗಿಲಿಗೆ ಕೊಂಡೊಯ್ಯುವ ಅಪರೂಪದ ಕಾರ್ಯಕ್ರಮಕ್ಕೆ ಉಡುಪಿಯಲ್ಲಿ ಚಾಲನೆ ದೊರೆತಿದೆ. 'ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ' ಪೈಲಟ್ ಯೋಜನೆಯಾಗಿ ಜಿಲ್ಲೆಯಲ್ಲಿ ಆರಂಭವಾಗಿದ್ದು, ಕುಡುಬಿ ಜನಾಂಗದವರ ಕಷ್ಟ-ಸುಖಗಳಿಗೆ ಸ್ಪಂದಿಸಲು ಸ್ವತಃ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ನಡೆಸಿದರು.
ಕರಾವಳಿಯ ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗಗಳಲ್ಲಿ ಕುಡುಬಿ ಜನಾಂಗವೂ ಒಂದು. ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಈ ಜನಾಂಗಕ್ಕೆ ಇವತ್ತಿಗೂ ಸರಕಾರದ ಸವಲತ್ತುಗಳು ತಲುಪಿಲ್ಲ. ಈ ಜನಾಂಗದವರು ಉಡುಪಿ ಜಿಲ್ಲೆಯ ನಾಲ್ಕೂರು- ನಂಚಾರು ಮುಂತಾದ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.
ರಾಜ್ಯ ಸರ್ಕಾರ ಆರಂಭಿಸಿರುವ 'ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ' ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಚಾಲನೆ ದೊರಕಿದೆ. ನಾಲ್ಕೂರು ಗ್ರಾಮವನ್ನು ಪೈಲಟ್ ಯೋಜನೆಗೆ ರಾಜ್ಯ ಸರ್ಕಾರ ಆಯ್ದುಕೊಂಡಿದ್ದು, ಜಿಲ್ಲಾಧಿಕಾರಿ ಜಗದೀಶ್ ಸಂಪೂರ್ಣ ದಿನ ಗ್ರಾಮದಲ್ಲಿ ಕುಳಿತು ಕಂದಾಯ ಇಲಾಖೆಗೆ ಸಂಬಂಧಪಟ್ಟ ಕಷ್ಟಗಳನ್ನು ಬಗೆಹರಿಸಿದರು. ಡೀಮ್ಡ್ ಫಾರೆಸ್ಟ್ & ಆರ್ಟಿಸಿ -ಪಿಂಚಣಿ ಮುಂತಾದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಜಿಲ್ಲಾಧಿಕಾರಿಗಳ ನಡೆಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.
ಓದಿ-'ನಾಳಿನ ಕೇಂದ್ರ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ': ಸಿದ್ದರಾಮಯ್ಯ