ಕರ್ನಾಟಕ

karnataka

ETV Bharat / state

ಹಿಜಾಬ್ ವಿವಾದ : ಕಾಲೇಜು ಆಡಳಿತ ಮಂಡಳಿಯಿಂದ ವಿದ್ಯಾರ್ಥಿನಿಯರಿಗೆ ಖಡಕ್ ಎಚ್ಚರಿಕೆ - ಹಿಜಾಬ್ ವಿವಾದ ಕಾಲೇಜು ಆಡಳಿತ ಮಂಡಳಿಯಿಂದ ವಿದ್ಯಾರ್ಥಿನಿಯರಿಗೆ ಖಡಕ್ ಎಚ್ಚರಿಕೆ

ಸರ್ಕಾರದ ಆದೇಶದಂತೆ ಸಮವಸ್ತ್ರದಲ್ಲಿ ಕಾಲೇಜಿಗೆ ಬರಬೇಕು, ಹಿಜಾಬ್ ಧರಿಸಿ ತರಗತಿಗೆ ಬರುವಂತಿಲ್ಲ.‌ ನಿಯಮ ಪಾಲಿಸಿ ತರಗತಿಗೆ ಬರುವುದಾದರೆ ಬನ್ನಿ, ಇಲ್ಲವಾದರೆ ಕ್ಯಾಂಪಸ್​​​ಗೆ ಬಂದು ಗೊಂದಲ ಸೃಷ್ಟಿಸಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕಾಲೇಜು ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ
ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ

By

Published : Jan 31, 2022, 9:57 PM IST

ಉಡುಪಿ :ಕಾಲೇಜಿಗೆ ಹಿಜಾಬ್ ಧರಿಸಿ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಮಹತ್ವದ ಸಭೆ ನಡೆದಿದೆ. ವಿವಾದ ಬಗೆಹರಿಸಲು ನಾನಾ ಮಾರ್ಗೋಪಾಯಗಳನ್ನು ಕಂಡುಕೊಂಡರೂ, ಪಟ್ಟು ಸಡಿಲಿಸದ ವಿದ್ಯಾರ್ಥಿನಿಯರಿಗೆ ಬಿಸಿ ಮುಟ್ಟಿಸಲು ಕಾಲೇಜು ಆಡಳಿತ ಮಂಡಳಿ ಮುಂದಾಗಿದೆ. ನಿಯಮ ಒಪ್ಪಿ ಕಾಲೇಜಿಗೆ ಬರುವುದಾದರೆ ಬನ್ನಿ, ಇಲ್ಲಾಂದ್ರೆ ಕ್ಯಾಂಪಸ್​​ಗೆ ಬಂದು ಇತರ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅಡ್ಡಿ ಪಡಿಸಬೇಡಿ ಎಂಬ ಖಡಕ್ ಎಚ್ಚರಿಕೆ ನೀಡಲಾಗಿದೆ.

ಹಿಜಾಬ್​​ಗಾಗಿ ಆರು ಮಂದಿ ವಿದ್ಯಾರ್ಥಿನಿಯರು ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸುತ್ತಿರುವ ಹೊರಾಟ ನಿರ್ಣಾಯಕ ಘಟ್ಟ ತಲುಪಿದೆ. ಇಂದು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮುಸ್ಲಿಂ ಮುಖಂಡರು ಪೋಷಕರು ಶಿಕ್ಷಣಾಧಿಕಾರಿಗಳು ಭಾಗವಹಿಸಿದ್ದರು.

ಕಾಲೇಜು ಆಡಳಿತ ಮಂಡಳಿಯಿಂದ ವಿದ್ಯಾರ್ಥಿನಿಯರಿಗೆ ಖಡಕ್ ಎಚ್ಚರಿಕೆ

ಸರ್ಕಾರದ ನಿರ್ಧಾರ ಪ್ರಕಟಗೊಳ್ಳುವ ವರೆಗೆ ಯಥಾಸ್ಥಿತಿ ಕಾಪಾಡುವುದು ನಮ್ಮ ಕರ್ತವ್ಯ. ಇನ್ನೆರಡು ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದೆ. ಇತರ ಮಕ್ಕಳ ಪೋಷಕರಿಂದ ದೂರುಗಳು ಬರುತ್ತಿವೆ. ಹೊರಗಿನಿಂದ ಜನ ಪದೇ ಪದೇ ಕಾಲೇಜ್ ಕ್ಯಾಂಪಸ್​​ಗೆ ಬರುವುದರಿಂದ ಶೈಕ್ಷಣಿಕ ವಾತಾವರಣ ಕೆಡುತ್ತಿದೆ. ಇನ್ಮುಂದೆ ಯಾರೂ ಕಾಲೇಜಿನ ಆವರಣದ ಒಳಗೆ ಬರುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಈ ಕುರಿತು ಮಾತನಾಡಿದ ಶಾಸಕ ರಘುಪತಿ ಭಟ್​, ಹಿಜಾಬ್​​​ಗಾಗಿ ಹೋರಾಡುತ್ತಿರುವ ನಾಲ್ವರು ವಿದ್ಯಾರ್ಥಿನಿಯರು ಮತ್ತು ಪೋಷಕರು ಈ ಸಭೆಯಲ್ಲಿ ಇಂದು ಹಾಜರಾಗಿದ್ದು, ಮನೆಯ ಪುರುಷರಲ್ಲಿ ವಿಚಾರ ತಿಳಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದರು.

ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು ಇಂದಿನ ಸಭೆಯಲ್ಲಿ ಭಾಗಿಯಾಗಿದ್ದರು. ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಹಿಜಾಬ್​ಗೆ ನಮ್ಮ ಬೆಂಬಲ ಇದೆ. ಹಿಜಾಬ್ ಧರಿಸುವುದು ಇಸ್ಲಾಂನ ಒಂದು ಪದ್ಧತಿ. ಆದರೆ ಶರಿಯತ್ ಆಧಾರಿತ ರಾಷ್ಟ್ರದ ನಿಯಮಗಳೇ ಬೇರೆ, ಪ್ರಜಾಪ್ರಭುತ್ವ ರಾಷ್ಟ್ರದ ನಿಯಮಗಳೇ ಬೇರೆ ಎಂದು ಹೇಳಿದರು.

ಭಾರತದಲ್ಲಿ ಸರ್ಕಾರದ ಆದೇಶ ಪಾಲಿಸಬೇಕು. ಹಿಜಾಬ್ ಧರಿಸದೆ ತರಗತಿಗೆ ಬರಲು ಅವಕಾಶ ಇದೆ. ಇಲ್ಲವಾದರೆ ಆನ್​​​ಲೈನ್ ಕ್ಲಾಸ್​​ಗೆ ಅವಕಾಶ ಕಲ್ಪಿಸಲಾಗಿದೆ. ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪೋಷಕರು ಹೇಳಿದ್ದಾರೆ. ಓರ್ವ ವಿದ್ಯಾರ್ಥಿನಿಯನ್ನು ಹೊರತುಪಡಿಸಿದರೆ ಇತರರು ಸರ್ಕಾರದ ನಿರ್ಧಾರವನ್ನು ಒಪ್ಪುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಮುಖಂಡರು ಹೇಳಿದ್ದಾರೆ.

ಮತ್ತೊಂದೆಡೆ ಕಾಲೇಜು ಮತ್ತು ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯೋರ್ವಳು ಹೈಕೋರ್ಟ್​ ಮೆಟ್ಟಿಲೇರಿದ್ದಾಳೆ. ಹಿಜಾಬ್ ಧರಿಸುವುದು​ ನಮ್ಮ ಮೂಲಭೂತ ಹಕ್ಕು ಎಂದು ಕೋರ್ಟ್ ಮೊರೆ ಹೋಗಿದ್ದಾಳೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details