ಉಡುಪಿ: 'ಬದುಕು ಬೇಡವೆನಿಸಿದೆ ಸರ್. ನನ್ನೆರಡು ಕಿಡ್ನಿ ಫೇಲ್ ಆಗಿದೆ. ವೈದ್ಯರು ಈ ತಿಂಗಳ ಕೊನೆಯಲ್ಲಿ ಗುಣವಾಗದಿದ್ದರೆ ಎರಡು ಕಿಡ್ನಿಯನ್ನೂ ಬದಲಾಯಿಸಬೇಕು ಎಂದಿದ್ದಾರೆ. ಆದರೆ ನನ್ನ ಬಳಿ ದುಡ್ಡಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲು ನಾನು ಹೇಡಿಯಲ್ಲ. ವಿಧಿ ನನ್ನ ಆಯಸ್ಸು ಇಷ್ಟೇ ಎಂದು ಬರೆದಿರಬೇಕು' ಎನ್ನುತ್ತಾ ಕಣ್ಣೀರಿಟ್ಟರು ರಕ್ತದಾನಿ ಶಾಂತರಾಮ್ ಮೊಗವೀರ.
ಬಿದ್ಕಲ್ ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಎಂಬಲ್ಲಿ ಮನೆ ಕಟ್ಟಿಕೊಂಡು 13 ವರ್ಷದ ಹೆಣ್ಣು ಮಗಳು, ಹೆಂಡತಿ, ತಾಯಿಯೊಂದಿಗೆ ಸುಖ ಜೀವನ ಸಾಗಿಸುತ್ತಿದ್ದ ಶಾಂತರಾಮ್ ಮೊಗವೀರ ಅವರಿಗೀಗ 38 ವರ್ಷ. ಆದರೆ ವಿಧಿ ಅವರ ಬಾಳಲ್ಲಿ ಬರಸಿಡಿಲಿನಂತೆ ಅಪ್ಪಳಿಸಿದ್ದು ಒಂದು ವರುಷದ ಹಿಂದೆ.
ಶಾಂತಾರಾಮ್ಗೆ ಹೊಟ್ಟೆನೋವು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಆರಂಭದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ನಂತರ ತನ್ನ ಕಿಡ್ನಿ ಫೇಲ್ ಆಗಿದೆ ಅನ್ನೋ ವಿಚಾರ ಅವರಿಗೆ ಗೊತ್ತಾಗಿದೆ. ಇದೀಗ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ವಾರಕ್ಕೆ 2 ಬಾರಿ ಡಯಾಲಿಸ್ ಹಾಗೂ ತಿಂಗಳಿಗೆ ಒಂದು ಬಾರಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿಯೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.