ಉಡುಪಿ:ಉದ್ಯಮಿ ಭಾಸ್ಕರ ಶೆಟ್ಟಿಯವರನ್ನು ಬರ್ಬರವಾಗಿ ಹತ್ಯೆಗೈದು ಹೋಮಕುಂಡದಲ್ಲಿ ಸುಟ್ಟುಹಾಕಿದ ಕೊಲೆ ಪ್ರಕರಣದಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಐದು ವರ್ಷದ ಬಳಿಕ ಕೊನೆಗೂ ಹಂತಕರಿಗೆ ತಕ್ಕ ಶಿಕ್ಷೆಯಾಗಿದೆ.
ಜಾಮೀನು ಪಡೆದು ಹೊರಗಿರುವ ಪತ್ನಿ ರಾಜೇಶ್ವರಿ ಶೆಟ್ಟಿ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆಕೆಯ ಗೆಳೆಯ ನಿರಂಜನ್, ಪುತ್ರ ನವನೀತ್, ಚಾಲಕ ರಾಘವೇಂದ್ರ ಇಂದು ಕೋರ್ಟಿಗೆ ಹಾಜರಾಗಿದ್ದರು. ವಾದ ಪ್ರತಿವಾದಗಳು ಪೂರ್ಣಗೊಂಡಿದ್ದು, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ಶಿಕ್ಷೆ ಆದೇಶ ಹೊರಡಿಸಿದೆ.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತಾರಾಮ್ ಶೆಟ್ಟಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. 78 ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿತ್ತು. ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಂದು ಹೋಮಕುಂಡದಲ್ಲಿ ಸುಟ್ಟಿದ್ದ ಪತ್ನಿ, ಪುತ್ರ, ಗೆಳೆಯ ಮೂವರು ಪ್ರಮುಖ ಆರೋಪಿಗಳು ದೋಷಿಗಳು ಎಂದು ಪರಿಗಣಿಸಿ, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.
ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್, ರಾಜೇಶ್ವರಿ ಗೆಳೆಯ ನಿರಂಜನ ಭಟ್, ಚಾಲಕ ರಾಘವೇಂದ್ರ ಸಹಕಾರದಿಂದ ಉದ್ಯಮಿ ಭಾಸ್ಕರ್ ಶೆಟ್ಟಿಯವರನ್ನು ಜುಲೈ 28 -2016 ರಲ್ಲಿ ಕೊಲೆ ಮಾಡಿ ಹೋಮಕುಂಡದಲ್ಲಿ ಸುಡಲಾಗಿತ್ತು. ನಾಲ್ಕು ವರ್ಷ 11 ತಿಂಗಳು ನಡೆದಿರುವ ವಾದ ಪ್ರತಿವಾದದ ಬಳಿಕ ನ್ಯಾಯಾಲಯ ಈ ಆದೇಶ ಪ್ರಕಟಿಸಿದೆ.