ಉಡುಪಿ :ರಸ್ತೆ ಅಗಲೀಕರಣ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ಬರೋಬ್ಬರಿ 1,014 ಮರಗಳು ನೆಲಕ್ಕುರುಳಲಿವೆ. ಇಲ್ಲಿನ ಬ್ರಹ್ಮಾವರ-ಪೇತ್ರಿ ಮಾರ್ಗದ ರಸ್ತೆ ಅಗಲೀಕರಣಕ್ಕೆ ನಿರ್ಧರಿಸಲಾಗಿದ್ದು, ಇದಕ್ಕಾಗಿ ರಸ್ತೆಯ ಎರಡೂ ಭಾಗದಲ್ಲಿ ತಲೆ ಎತ್ತಿರುವ ಮರಗಳಿಗೆ ಕೊಡಲಿ ಏಟು ನೀಡಲು ಇಲಾಖೆ ನಿರ್ಧರಿಸಿದೆ.
ಈಗಾಗಲೇ ಮರಗಳನ್ನ ಕಡಿಯಲು ಆರಂಭಿಸಲಾಗಿದ್ದು, ದಶಕಕ್ಕೂ ಹಳೆಯ ಬೃಹತ್ ಮರಗಳು ನೆಲೆಕ್ಕೆ ಉರುಳಿವೆ. ರಸ್ತೆಯ ಎರಡೂ ಕಡೆ ಹಲಸು ಸೇರಿದಂತೆ ಔಷಧಿ ಮರಗಳು ತಲೆ ಎತ್ತಿ ನಿಂತಿದ್ದವು. ಇದೀಗ ಅರಣ್ಯ ಇಲಾಖೆ ಮರಗಳಿಗೆ ಕೊಡಲಿ ಹಾಕಿದೆ.
ಮರಗಳ ಮಾರಣಹೋಮದ ವಿರುದ್ಧ ಸ್ಥಳೀಯ ಕೆಲ ಯುವಕರು ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಮತ್ಯಾರು ಆ ಕಡೆ ಗಮನ ನೀಡಲಿಲ್ಲ. ಹೀಗಾಗಿ ಯಾರ ಅಡಚಣೆಯೂ ಇಲ್ಲದೆ ಮರ ತೆರವು ಕಾರ್ಯ ಭರದಿಂದ ಸಾಗುತ್ತಿದೆ.
ರಸ್ತೆ ಅಗಲೀಕರಣಕ್ಕೆ ಮರಗಳ ಮಾರಣಹೋಮ.. ಬ್ರಹ್ಮಾವರ ತಾಲೂಕು ಕೇಂದ್ರದಿಂದ ಪೇತ್ರಿವರೆಗಿನ ಒಟ್ಟು 13 ಕಿ.ಮೀ ರಸ್ತೆ ಅಗಲೀಕರಣವಾಗುತ್ತಿದೆ. ರಸ್ತೆ ಬದಿಗಳಲ್ಲಿ ನೆರಳಿಗಾಗಿ ಮಾತ್ರವಲ್ಲದೆ ಹಣ್ಣು ನೀಡುವ ಮರವನ್ನೂ ನೆಡಲಾಗಿತ್ತು. ಇದೀಗ ಈ ಮರಗಳು ನೆಲಕ್ಕೆ ಬಿದ್ದಿವೆ.
ಒಂದು ಮರದ ಜಾಗದಲ್ಲಿ ಇಲಾಖೆ ಮೂರು ಮರಗಳನ್ನ ನೆಟ್ಟು ಪೋಷಿಸಲಿದೆಯಂತೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಅರಣ್ಯ ಇಲಾಖೆಗೆ 60 ಲಕ್ಷ ರೂಪಾಯಿ ಮಂಜೂರು ಮಾಡಿದೆ. ಒಂದು ಮರಕ್ಕೆ 300 ರೂಪಾಯಿಯಂತೆ ಅರಣ್ಯ ಬೆಳೆಸುವ ಕಾರ್ಯಕ್ಕೆ ಇಲಾಖೆ ಮುಂದಾಗಲಿದೆ.
ಅಷ್ಟೇ ಅಲ್ಲ, 2ನೇ ಹಂತದಲ್ಲಿ ನೀಲಾವರದಿಂದ ಪೇತ್ರಿವರೆಗಿನ 500ಕ್ಕೂ ಅಧಿಕ ಮರ ಕಡಿಯಲು ಬಾಕಿಯಿದೆ. ಲೋಕೋಪಯೋಗಿ ಇಲಾಖೆ ಮತ್ತೆ ಹಣ ಕೊಟ್ಟರೆ ಈ ಮರಗಳೂ ಶೀಘ್ರವೇ ನೆಲಕ್ಕೆ ಉರುಳಲಿವೆ.
ಇದನ್ನೂ ಓದಿ:ಪೇಜಾವರ ಶ್ರೀಗಳಿಗೆ 'Y' ಭದ್ರತೆ ಕಲ್ಪಿಸಿದ ರಾಜ್ಯ ಸರ್ಕಾರ