ಉಡುಪಿ:ಬೈಂದೂರು ತಾಲೂಕು ಕೊಲ್ಲೂರಿನ ಕಾಡಿನಲ್ಲಿ ಸಿಕ್ಕ ತಾತ್ಕಾಲಿಕ ಗುಡಿಸಲು ರಾಜ್ಯದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಚಿಗುರಿತಾ ಎಂಬ ಅನುಮಾನಗಳಿಗೆ ಕಾರಣವಾಗಿತ್ತು. ಆದ್ರೆ ಪೊಲೀಸರು ತನಿಖೆ ನಡೆಸಿ, ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಜಿಲ್ಲೆಯಲ್ಲಿ ನಕ್ಸಲ್ ಚಲನವಲನ ಇಲ್ಲ...ಗೊಂದಲಗಳಿಗೆ ತೆರೆ ಎಳೆದ ಉಡುಪಿ ಎಸ್ಪಿ ಈ ಕುರಿತು ಮಾಧ್ಯಮದವರೊಂದಿಗೆ ಮಾತಾನಾಡಿದ ಎಸ್ಪಿ ನಿಶಾ ಜೇಮ್ಸ್, ಬೈಂದೂರಿನಲ್ಲಿ ಮೂರೂ ಇಲಾಖೆಯ ಸಿಬ್ಬಂದಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದೇವೆ. ಆ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಅಥವಾ ಚಲನವಲನ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಚಾರಣಿಗರೋ ಅಥವಾ ಪ್ರವಾಸಕ್ಕೆ ಭಕ್ತರು ತಾತ್ಕಾಲಿಕ ಟೆಂಟ್ ಮಾಡಿರಬಹುದು ಅನ್ನುವುದು ಪೊಲೀಸ್ ತಪಾಸಣೆಯಲ್ಲಿ ತಿಳಿದುಬಂದಿದೆ. ಪಕ್ಕದಲ್ಲೇ ಧ್ಯಾನ ಕೇಂದ್ರವಿದ್ದು, ಭಕ್ತರು ಧ್ಯಾನ ಮಾಡಲು ತಾತ್ಕಾಲಿಕ ಟೆಂಟ್ ಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಹೆಬ್ರಿ ತಾಲೂಕಿನ ನಾಡ್ಪಾಲ್ನಿಂದ ಕರಾಚಿಗೆ ದೂರವಾಣಿ ಕರೆಯೊಂದು ಹೋಗಿದೆ. ಹೆಬ್ರಿಗೆ ಮತ್ತು ಕೊಲ್ಲೂರಿಗೆ ಎನ್ಐಎ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂಬ ಸುದ್ದಿ, ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ನಕ್ಸಲ್ ಸುದ್ದಿ ಮತ್ತು ಭಯೋತ್ಪಾಧಕರ ಚಲನವಲನದ ವರದಿ ಒಂದಕ್ಕೊಂದು ಲಿಂಕ್ ಆಗಿ, ಜನರಲ್ಲಿ ಆತಂಕ ಮೂಡಿಸಿತ್ತು.
ಇದಕ್ಕೂ ಸ್ಪಷ್ಟನೆ ನೀಡಿರುವ ಎಸ್.ಪಿ. ನಿಶಾ ಅವರು ಎನ್ಐಎ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿಲ್ಲ. ನಕ್ಸಲ್ ಚಲನವಲನ ಕೂಡ ಜಿಲ್ಲೆಯಲ್ಲಿ ಕಂಡುಬಂದಿಲ್ಲವೆಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.