ಉಡುಪಿ:ಕನ್ನಡ ರಾಜ್ಯೋತ್ಸವದಂದು ಈ ದಿನ ಕನ್ನಡ ಧ್ವಜ ಹಾರಿಸಿಲ್ಲ, ಬದಲಾಗಿ ರಾಷ್ಟ್ರಧ್ವಜ ಹಾರಿಸಲಾಗಿದೆ. ಮುಂದಿನ ವರ್ಷ ಎರಡೂ ಬಾವುಟಗಳನ್ನು ಹಾರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
'ಯಾವುದೇ ಸುತ್ತೋಲೆ ಬಂದಿಲ್ಲ'
ಜಿಲ್ಲಾಡಳಿತದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಕನ್ನಡ ಧ್ವಜದ ಬದಲು ರಾಷ್ಟ್ರ ಧ್ವಜ ಹಾರಿಸಬೇಕೆಂದು ರಾಜ್ಯ ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಯಾವುದೇ ಸುತ್ತೋಲೆ ಸ್ವೀಕರಿಸಿಲ್ಲ. ಇಲ್ಲಿ ಹಿಂದಿನಿಂದಲೂ ರಾಷ್ಟ್ರ ಧ್ವಜ ಹಾರಿಸಲಾಗ್ತಿದೆ. ಮುಂದಿನ ವರ್ಷದಿಂದ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸ್ತೇವೆ ಎಂಬ ಭರವಸೆ ಕೊಟ್ಟರು.
'ಸೈಬರ್ ಠಾಣೆಗಳನ್ನು ಹೆಚ್ಚಿಸುತ್ತೇವೆ'
ದೇಶದಲ್ಲಿ ಡಿಜಿಟಲೈಸೇಶನ್ ಹೆಚ್ಚಾಗಿರುವುದರಿಂದ ಹಣಕಾಸು ವಿನಿಮಯಗಳೆಲ್ಲಾ ಆನ್‌ಲೈನ್ ಮುಖಾಂತರ ನಡೆಯುತ್ತಿದೆ. ಹೀಗಾಗಿ ಸೈಬರ್ ಕ್ರೈಂ ಹೆಚ್ಚಾಗಿದೆ. ಕರ್ನಾಟಕ ಐಟಿ ಕ್ಷೇತ್ರದಲ್ಲಿ ಬಹಳಷ್ಟು ಮುಂದೆ ಇರುವುದರಿಂದ ಇಲ್ಲಿ ಡಿಜಿಟಲೈಸೇಶನ್ ಮಿಸ್ ಯೂಸ್ ಆಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಸೆನ್ ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚು ಮಾಡುತ್ತೇವೆ. ಇಸ್ರೇಲಿ ಗೂಢಚರ್ಯೆಯನ್ನು ಕೂಡಾ ಪತ್ತೆ ಮಾಡುತ್ತೇವೆ ಎಂದರು.