ಉಡುಪಿ: ನಗರದ ಹೃದಯ ಭಾಗದ ಹೋಲ್‌ಸೇಲ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ದೋಚಿದ್ದಾರೆ.
ಉಡುಪಿ ನಗರದ ಹೃದಯಭಾಗದಲ್ಲೇ ಕಳ್ಳತನ: 12 ಲಕ್ಷ ದೋಚಿದ ಖದೀಮರು - ಉಡುಪಿ ಶ್ರೀ ಕೃಷ್ಣ ಮಠ
ಉಡುಪಿಯ ಮೈತ್ರಿ ಕಾಂಪ್ಲೆಕ್ಸ್‌ನ ತಳಮಹಡಿಯಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ಹೋಲ್ ಸೇಲ್ ಅಂಗಡಿಯ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಡ್ರಾವರ್ನಲ್ಲಿದ್ದ 12 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.

ಕಳೆದ ಮೂರು ದಿನದಿಂದ ಬ್ಯಾಂಕ್ ರಜೆ ಇದ್ದ ಕಾರಣ ನಗದನ್ನು ಅಂಗಡಿ ಮಾಲೀಕ ರವೀಂದ್ರ ನಾಯಕ್ ಅವರು ಅಂಗಡಿಯಲ್ಲೇ ಇಟ್ಟಿದ್ದರು. ನಗದು ಇಟ್ಟಿರುವ ಡ್ರಾವರನ್ನೇ ಮೀಟಿ ಹಣ ದೋಚಿರುವುದು ನೋಡಿದರೆ ಇದು ತಿಳಿದವರೇ ನಡೆಸಿರುವ ಕೃತ್ಯವೆಂದು ಸ್ಥಳೀಯರು ಹಾಗೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಕಳವಿಗಾಗಿ ಕಬ್ಬಿಣದ ಸರಳುಗಳನ್ನು ತಂದು, ಅಂಗಡಿಯ ಶಟರನ್ನು ಮುರಿದು ಒಳಹೋಗಿದ್ದು ಮಾತ್ರವಲ್ಲ , ಹಣವಿದ್ದ ಡ್ರಾವರನ್ನು ಮಾತ್ರ ಮೀಟಿ ತೆಗೆದು ಹಣದೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಅಂಗಡಿಯಲ್ಲಿ 2 ಸಿಸಿ ಕ್ಯಾಮರಾವಿದ್ದರೂ ಅದು ಕೆಟ್ಟು ಹೋಗಿತ್ತು. ಹತ್ತಿರದ ಕೃಷ್ಣ ಕೃಪಾ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಅಂಗಡಿಗಳ ಸಿಸಿ ಕ್ಯಾಮರಾ ತೆಗೆದು ಪರಿಶೀಲಿಸಲಾಗುತ್ತಿದೆ. ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್, ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.