ಉಡುಪಿ:ಕೊರೊನಾ ಒಂದೆಡೆ ನೊಂದವರನ್ನು ಇನ್ನೂ ತುಳಿಯುತ್ತಿದ್ದರೆ, ಒಂದಿಷ್ಟು ಜನ ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದರೆ, ಇಂತಹವರ ಮಧ್ಯದಲ್ಲೂ ಕೆಲವರು ಇನ್ನೂ ದಯೆ, ಮಾನವೀಯತೆಗೆ ಬೆಲೆಕೊಡುವವರಿದ್ದಾರೆ ಎಂಬುದಕ್ಕೆ ಉಡುಪಿಯ ಆಶಾ ಕಾರ್ಯಕರ್ತೆ ಕಂ ಆಟೋ ಚಾಲಕಿಯೇ ಉತ್ತಮ ನಿದರ್ಶನ.
ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಸೌಲಭ್ಯವಿಲ್ಲ. ಕನಿಷ್ಠ ವೇತನವೂ ಇಲ್ಲವೆಂದು ದಿನಬೆಳಗಾದರೆ ಸೇವೆಯನ್ನು ಸ್ಥಗಿತಗೊಳಿಸಿ ಕಾರ್ಯಕರ್ತೆಯರು ಧರಣಿ ಕೂರುತ್ತಿದ್ದಾರೆ. ಇವೆಲ್ಲವುಗಳ ಮಧ್ಯೆ ಈ ಆಶಾ ಕಾರ್ಯಕರ್ತೆ ಬೆಳಗ್ಗೆ ಕರ್ತವ್ಯ ನಿರ್ವಹಿಸಿ ಮಧ್ಯಾಹ್ನದ ನಂತರ ಆಟೋ ಚಾಲನೆ ಮಾಡ್ತಾರಂತೆ. ಅದರಲ್ಲೂ ತಮ್ಮ ಆಟೋ ಮೂಲಕ ಸೇವೆಯ ಮತ್ತೊಂದು ಮಾರ್ಗ ಹುಡುಕಿಕೊಂಡಿದ್ದಾರೆ.
ಆಟೋ ಚಲಾಯಿಸೋ ಈ ಆಶಾ ಕಾರ್ಯಕರ್ತೆಯ ಸೇವೆ ಅನನ್ಯ ಹೌದು, ಆಶಾ ಕಾರ್ಯಕರ್ತೆ ರಾಜೀವಿ ಅವರು ಗರ್ಭಿಣಿಯರಿಗೆ ಉಚಿತ ಸೇವೆ ಕೊಡುವುದಲ್ಲದೇ ದಿನದ 24/7 ಸೇವೆ ಲಭ್ಯವಿರುವುದಾಗಿ ಬೋರ್ಡ್ ಹಾಕಿಕೊಂಡಿದ್ದಾರೆ. ಅಂತೆಯೇ ಶುಕ್ರವಾರ ನಸುಕಿನಜಾವ 3.15 ರ ಸಮಯದಲ್ಲಿ ಗರ್ಭಿಣಿಯೊಬ್ಬರು ಹೆರಿಗೆ ನೋವು ತಾಳಲಾರದೆ ಅಳುತ್ತಾ ಇವರಿಗೆ ಕರೆ ಮಾಡಿದ್ದಾರೆ. ತಕ್ಷಣ ಖಾಕಿ ಹಾಕಿಕೊಂಡು ಗರ್ಭಿಣಿ ಇದ್ದಲ್ಲಿಗೆ ಹೊರಟ ಇವರು, ಸುಮಾರು 20 ಕಿಲೋ ಮೀಟರ್ ಕ್ರಮಿಸಿ ದೂರದ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಜಿಲ್ಲಾ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೆ ಮಹಿಳೆಗೆ ಹೆರಿಗೆಯಾಗಿ ಹೆಣ್ಣುಮಗು ಜನಿಸಿದೆ.
ಆಟೋ ಚಲಾಯಿಸೋ ಈ ಆಶಾ ಕಾರ್ಯಕರ್ತೆಯ ಸೇವೆ ಅನನ್ಯ ರಾಜೀವಿಯವರು ದಿಟ್ಟತನದಿಂದ ಕೆಲಸ ಮಾಡುವುದು ಎಲ್ಲರಿಗೂ ಮಾದರಿಯೇ ಸರಿ. ಗಂಡನನ್ನು ಕಳೆದುಕೊಂಡಿರುವ ಇವರು ಆಶಾ ಕಾರ್ಯಕರ್ತೆಯಾಗಿ ದುಡಿಯುತ್ತಾ, 20 ವರ್ಷಗಳಿಂದ ರಿಕ್ಷಾ ಓಡಿಸುತ್ತಿದ್ದಾರೆ. ಮಗಳಿಗೆ ಮದುವೆ ಮಾಡಿಸಿ, ಮಗನೊಂದಿಗೆ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ.